ರಾಜ್ಯದ 28 ಕ್ಷೇತ್ರಗಳಲ್ಲಿಯೂ ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧೆ: ಉಪೇಂದ್ರ

Update: 2019-04-02 17:27 GMT

ಮೈಸೂರು,ಏ.2: ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಚಲನಚಿತ್ರ ನಟ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಆಶಾರಾಣಿ ಪರ ಇಂದು ಮೈಸೂರಿನಲ್ಲಿ ಪ್ರಚಾರ ಕೈಗೊಂಡ ಉಪೇಂದ್ರ ನಂತರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯ 28 ಕ್ಷೇತ್ರಗಳಲ್ಲಿಯೂ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕಲಾಗುವುದು. ಮೊದಲ ಹಂತದಲ್ಲಿ 14 ಜನರ ಪಟ್ಟಿಯನ್ನು ಬಿಡಗಡೆ ಮಾಡಲಾಗಿದೆ. ಈಗಾಗಲೇ ಪ್ರಚಾರ ಕೈಗೊಂಡ ಕಡೆಗಳಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ  ಎಂದು ತಿಳಿಸಿದರು.

ಕಾರ್ಮಿಕನಾಗಿ ಹಾಗೂ ಸತ್ಯ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಮತ್ತು ರಾಷ್ಟ್ರದ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲು ರಾಜನಾಗುವುದಿಲ್ಲ, ಬದಲಿಗೆ ಸೇವಕನಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವೆ ಎಂದರು.

ನಮ್ಮ ಪಕ್ಷದಲ್ಲಿ ಪ್ರಣಾಳಿಕೆ ಇಲ್ಲ. ಜನರ ಹೇಳುವುದೇ ಪ್ರಣಾಳಿಕೆ. ಕೋರ್ಟಿನಲ್ಲಿ ಪ್ರಣಾಳಿಕೆಗೆ ಸಂಬಂಧಿಸಿದ ಕಾರ್ಯಕ್ರಮಗಳು ರಿಜಿಸ್ಟರ್ ಆಗಬೇಕು. ಅವುಗಳನ್ನ ಪ್ರತಿನಿಧಿಗಳು ಅಭಿವೃದ್ಧಿ ಪಡಿಸಲಿಲ್ಲವೆಂದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸವಂತಹ ಬದಲಾವಣೆಯನ್ನು ತರಬೇಕು. ನಮ್ಮ ಪಕ್ಷದ ಪರವಾಗಿ ಯಾವುದೇ ಸ್ಟಾರ್ ಗಳು ಪ್ರಚಾರ ನಡೆಸುವುದಿಲ್ಲ. ಸಿನಿಮಾದಲ್ಲಿ ಮಾತ್ರ ಸ್ಟಾರ್ ಗಳು. ನಮಗೆ ಸುಮಲತಾ ಅಥವಾ ಪ್ರಕಾಶ್ ರೈ ರೀತಿಯಲ್ಲಿ ಸ್ಟಾರ್ ಪ್ರಚಾರಕರು ಬೇಕಿಲ್ಲ. ನಮ್ಮ ಪಕ್ಷದಲ್ಲಿ ಪ್ರಜೆಗಳೇ ಸ್ಟಾರ್ ಗಳು. ಮಾಧ್ಯಮದವರ ಮೂಲಕ ನಮ್ಮ ವಿಚಾರಗಳನ್ನು ಜನರಿಗೆ ತಲುಪಲು ಹೊರಟಿದ್ದೇವೆ ಹೊರೆತು ಯಾವುದೇ ಜಾಥಾ ಮತ್ತು ಸಮಾವೇಶಗಳಿಂದಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕಾರಣ ವ್ಯಾಪಾರವಾಗದೆ ಉದ್ಯೋಗವಾಗಬೇಕು, ಉದ್ಯೋಗ ಹರಿಸಿ ಬಂದಿದ್ದೇವೆ. ನಮಗೆ ಅವಕಾಶ ನೀಡಿ, ಇಲ್ಲವೇ ಬೇರೊಂದು ಕೆಲಸವನ್ನು ಹರಸುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಆಶಾರಾಣಿ ಉಪಸ್ಥಿತರಿದ್ದರು.

ಅಭ್ಯರ್ಥಿಯ ತಪ್ಪಿಗೆ ಉಪೇಂದ್ರ ಕ್ಷಮೆಯಾಚನೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಆಶಾರಾಣಿಯವರು ಮಾಡಿಕೊಂಡ ಯಡವಟ್ಟಿಗೆ ಪಕ್ಷದ ಸಂಸ್ಥಾಪಕ, ಚಿತ್ರನಟ ರಿಯಲ್ ಸ್ಟಾರ್ ಉಪೇಂದ್ರ ಕ್ಷಮೆ ಯಾಚಿಸಿದ ಘಟನೆ ಪತ್ರಕರ್ತರ ಭವನದಲ್ಲಿ ನಡೆಯಿತು.

ನಗರದ ಜನನಿಬಿಡ ಪ್ರದೇಶವಾದ ಚಿಕ್ಕ ಗಡಿಯಾರದ ಬಳಿ ನಡು ರಸ್ತೆಯಲ್ಲಿಯೇ ಚುನಾವಣಾ ಪ್ರಚಾರ ಮಾಡುತ್ತಿದ್ದ ಆಶಾರಾಣಿಯವರಿಗೆ ಸಾರ್ವಜನಿಕರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಿಪಡಿಸಿದರು. ಇದಕ್ಕೆ ಕ್ಯಾರೆ ಎನ್ನದೇ ಅವರು ಪತ್ರಕರ್ತರು ಸೇರಿದಂತೆ ಸಾರ್ವಜನಿಕರ ಮೇಲೆಯೇ ಹರಿಹಾಯ್ದಿದ್ದಾರೆ. ಆ ಸಂದರ್ಭದಲ್ಲಿ ವಾಹನ ಚಾಲಕರಿಗೆ ಹಾಗೂ ಸ್ಥಳೀಯರಿಗೆ ಆಗುತ್ತಿದ್ದ ತೊಂದರೆಯನ್ನು ಪ್ರಶ್ನಿಸಿದ ಪತ್ರಕರ್ತರೊಂದಿಗೆ ಅನುಚಿತ ಹಾಗೂ ಅಸಮಂಜಸವಾಗಿ ಪ್ರತಿಕ್ರಿಯಿಸಿ, ನನಗೆ ಮತದಾರರೇ ಸಾಕು, ಇನ್ಯಾರೂ ಬೇಡವೆಂದು ಉಡಾಫೆಯಾಗಿ ಉತ್ತರಿಸಿದ್ದಾರೆ. ಅಭ್ಯರ್ಥಿಯ ಈ ರೀತಿಯ ವರ್ತನೆಗೆ ಉಪೇಂದ್ರ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News