ಬನಾರಸ್ ಹಿಂದೂ ವಿವಿ ಕ್ಯಾಂಪಸ್ ನಲ್ಲಿ ಶೂಟೌಟ್: ವಿದ್ಯಾರ್ಥಿ ಮೃತ್ಯು

Update: 2019-04-03 06:36 GMT

ವಾರಣಾಸಿ, ಎ.3: ಪ್ರತಿಭಟನೆಯೊಂದಕ್ಕೆ ಸಂಬಂಧಿಸಿ ಅಮಾನತಾಗಿದ್ದ ವಿದ್ಯಾರ್ಥಿಯೊಬ್ಬನನ್ನು ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಹಿಂದೂ ವಿವಿಯ ಕ್ಯಾಂಪಸ್ ನೊಳಗಡೆ ನಡೆದಿದೆ.

ಕೂಡಲೇ ಗಾಯಾಳು ಗೌರವ್ ಸಿಂಗ್ ನನ್ನು ಯುನಿವರ್ಸಿಟಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿ  2017ರಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಗೌರವ್ ಸಿಂಗ್ ನನ್ನು ವಿವಿ ಆಡಳಿತ ಅಮಾನತುಗೊಳಿಸಿತ್ತು. ಪ್ರತಿಭಟನೆ ಸಂದರ್ಭ ನಡೆದ ಘರ್ಷಣೆಯಲ್ಲಿ ಬಸ್ ವೊಂದಕ್ಕೆ ಬೆಂಕಿ ಹಚ್ಚಲು ಆತ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ.

ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ 2017ರಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಹಲವು ವಿದ್ಯಾರ್ಥಿಗಳು, ಇಬ್ಬರು ಪತ್ರಕರ್ತರು ಗಾಯಗೊಂಡಿದ್ದರು. ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು.

ಕ್ಯಾಂಪಸ್ ನೊಳಗಿರುವ ಬಿರ್ಲಾ ಹಾಸ್ಟೆಲ್ ಬಳಿ ನಿಂತಿದ್ದ ಗೌರವ್ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ. ಗೌರವ್ ಮೇಲೆ 10 ಗುಂಡುಗಳಿಂದ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಯುನಿವರ್ಸಿಟಿಯ ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News