ಮಂಡ್ಯ ಕಾಂಗ್ರೆಸ್ ಮುಖಂಡ ಆತ್ಮಾನಂದ ನಿವಾಸದ ಮೇಲೆ ಐಟಿ ದಾಳಿ

Update: 2019-04-03 12:06 GMT

ಬೆಂಗಳೂರು, ಎ. 3: ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡ ಎಂ.ಎಸ್.ಆತ್ಮಾನಂದ ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಆತ್ಮಾನಂದ ಅವರ ಮಂಡ್ಯದ ಸುಭಾಷ್‌ನಗರ 1ನೆ ತಿರುವಿನಲ್ಲಿರುವ ನಿವಾಸದ ಮೇಲೆ ನಾಲ್ಕೈದು ಮಂದಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹಣ-ಆಸ್ತಿ ಸೇರಿದಂತೆ ಇನ್ನಿತರ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆಂದು ಗೊತ್ತಾಗಿದೆ.

ಕಾಂಗ್ರೆಸ್ ಮುಖಂಡ ಆತ್ಮಾನಂದ ನಿವಾಸದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ದಾಳಿ ನಡೆಸಿ ಪರಿಶೀಲನೆ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಸೇರಿದಂತೆ ಹಣದ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲದಿನಗಳ ಹಿಂದೆಯಷ್ಟೇ ರಾಜ್ಯದ ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಐಟಿ ದಾಳಿ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಮುಖಂಡರು ಐಟಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಐಟಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಮೈತ್ರಿ ಮುಖಂಡರು, ‘ಕಾಂಗ್ರೆಸ್- ಜೆಡಿಎಸ್ ಮುಖಂಡರಷ್ಟೇ ಐಟಿ ಅಧಿಕಾರಿಗಳಿಗೆ ಕಾಣುತ್ತಿದ್ದಾರೆ. ಪ್ರಧಾನಿ ಮೋದಿ ಐಟಿ ಅಧಿಕಾರಿಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ’ ಎಂದು ಟೀಕಿಸಿದ್ದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣಿಗೆ ಮಂಡ್ಯ ಮತ್ತು ಹಾಸನ ಎರಡು ಜಿಲ್ಲೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಷ್ಟೇ ಕಾಣಿಸುತ್ತಾರೆ. ಆದರೆ, ಬಿಜೆಪಿ ಮುಖಂಡರು ಭಿಕ್ಷೆ ಎತ್ತಿ ಚುನಾವಣೆ ನಡೆಸುತ್ತಿದ್ದಾರೆ. ಹೀಗಾಗಿ ಅವರೆಲ್ಲ ಐಟಿ ಅಧಿಕಾರಿಗಳ ಕಣ್ಣಿಗೆ ಕಾಣಿಸುವುದಿಲ್ಲ

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News