ಮೋದಿ ಮುಸ್ಲಿಮರ ವಿರೋಧಿಯಲ್ಲ: ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು

Update: 2019-04-03 17:31 GMT

ಆಲೂರು,ಎ.3: ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರೋಧಿಯಲ್ಲ, ಅವರು ಉಗ್ರಗಾಮಿಗಳ ವಿರೋಧಿ ಎಂದು ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದರು.

ಅವರು ಆಲೂರು ತಾಲೂಕಿನ ಡಿ. ಕಣಗಾಲು, ಹುಣಸವಳ್ಳಿ, ಕಣತೂರು, ಪಾಳ್ಯ ಹಾಗೂ ಭೈರಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಳೆದ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ದೇಶ ಬಿಡುತ್ತೇನೆಂದು ಹೇಳಿದ್ದರು. ಈಗ ಸಿದ್ದರಾಮಯ್ಯನವರ ಜೊತೆ ಸೇರಿ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ. ಭಾರತದ 130 ಕೋಟಿ ಜನತೆಯ ಭದ್ರತೆ ಹಾಗೂ ಸುಭದ್ರತೆಯ ದೃಷ್ಟಿಯಿಂದ ಪ್ರಧಾನಿ ಮೋದಿಯ ನಾಯಕತ್ವ ಅವಶ್ಯಕತೆ ಇದೆ. ಆದ್ದರಿಂದ ಹಾಸನ ಲೋಕಸಭಾ ಕ್ಷೇತ್ರದ ಮತದಾರರು ಕುಟುಂಬ ರಾಜಕಾರಣಕ್ಕೆ ಬೇಸತ್ತು ಸಂಪೂರ್ಣವಾಗಿ ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪ್ರಧಾನಿ ಮೋದಿ ಮುಸ್ಲಿಂ ವಿರೋಧಿಗಳೆಂದು ಪ್ರತಿಪಕ್ಷದವರು ಹೇಳುತ್ತಿರುವುದು ಸರಿಯಲ್ಲ. ಮೋದಿ ಉಗ್ರಗಾಮಿಗಳ ವಿರೋಧಿ ಎಂದು ಹೇಳಿದರು.

ಬಿಜೆಪಿ ಮುಖಂಡ ಹಾಗೂ ಶಾಸಕ ಪ್ರೀತಮ್.ಜಿ.ಗೌಡ ಮಾತನಾಡಿ, ಜಿಲ್ಲೆಯಲ್ಲಿ 40-50 ವರ್ಷಗಳಿಂದಲೂ ಕುಟುಂಬ ರಾಜಕಾರಣ ಮಾಡುತ್ತಾ ಜನ ಸಾಮಾನ್ಯರ ಮೂಗಿಗೆ ತುಪ್ಪ ಸವರುತ್ತಾ ರಾಜಕಾರಣ ಮಾಡಿಕೊಂಡು ಬಂದಿರುವ ಅಪ್ಪ ಮಕ್ಕಳಿಗೆ ಇತಿಶ್ರೀ ಹಾಡಲೇಬೇಕಾಗಿದೆ. 6 ಬಾರಿ ಚುನಾವಣೆಯಲ್ಲಿ ಗೆದ್ದ ಪರಿಶಿಷ್ಟ ಜಾತಿ ಎಚ್.ಕೆ.ಕುಮಾರಸ್ವಾಮಿಯವರಿಗೆ ಮಂತ್ರಿಗಿರಿ ನೀಡದೇ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡಿದ್ದಾರೆ. ಅದೇ ರೀತಿ ಅವರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೂ ಸಚಿವ ಸ್ಥಾನ ನೀಡದೆ ದ್ರೋಹವೆಸಗಿದ್ದಾರೆ. ಆದ್ದರಿಂದ ದೇಶಕ್ಕೆ ಸಮರ್ಥ ನಾಯಕತ್ವದ ಅವಶ್ಯಕತೆ ಇದ್ದು, ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಜಿಲ್ಲೆಯ ಎಲ್ಲಾ ಜನಾಂಗದ ಮತದಾರರು ಬಿಜೆಪಿ ಬೆಂಬಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್, ಮಾಜಿ ಶಾಸಕ ಬಿ.ಆರ್.ಗುರುದೇವ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಾಗೇಶ್, ಬಿಜೆಪಿ ನಾಯಕರಾದ ಎಚ್.ಬಿ.ಧರ್ಮರಾಜು, ಹೇಮಂತ್ ಎ.ಎಸ್.ಈಶ್ವರ, ಅಜಿತ್ ಚಿಕ್ಕಣಗಾಲು, ಕಣಗಾಲು ಲೋಕೇಶ್, ಮಂಜೇಶ್  ಮಲ್ಲೇಶ್, ವಿಜಯ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News