ನಮೋ ಟಿವಿ ‘ನ್ಯೂಸ್ ಸರ್ವಿಸ್’ ಅಲ್ಲ: ಟಾಟಾ ಸ್ಕೈ ಸಿಇಒ ಸ್ಪಷ್ಟನೆ

Update: 2019-04-04 10:49 GMT

ಹೊಸದಿಲ್ಲಿ, ಎ.4: “ನಮೋ ಟಿವಿ ಹಿಂದಿ ನ್ಯೂಸ್ ಸರ್ವಿಸ್ ಅಲ್ಲ” ಎಂದು ಟಾಟಾ ಸ್ಕೈ ಸಿಇಒ ಹರಿತ್ ನಾಗ್ಪಾಲ್ ಸ್ಪಷ್ಟ ಪಡಿಸುವುದರೊಂದಿಗೆ ‘ನಮೋ ಟಿವಿ’ ವಿವಾದ ಇನ್ನೊಂದು ತಿರುವು ಪಡೆದಿದೆ.

ಪ್ರಧಾನಿ ನರೇಂದ್ರ ಮೋದಿಯ ಚುನಾವಣಾ ಭಾಷಣಗಳು ಹಾಗೂ ಬಿಜೆಪಿ ಪರ ಸುದ್ದಿಗಳನ್ನು ಚುನಾವಣಾ ಸಮಯದಲ್ಲಿ ಪ್ರಸಾರ ಮಾಡುತ್ತಿರುವ ಈ ಟಿವಿ ವಾಹಿನಿಯ ಬಗ್ಗೆ ಟಾಟಾ ಸ್ಕೈ ಇಂದು ಮಾಡಿದ ಕೆಲವೊಂದು ಟ್ವೀಟ್ ಗಳ ಬಗ್ಗೆ ಹರಿತ್ ಸ್ಪಷ್ಟೀಕರಣ ನೀಡಿದ್ದಾರೆ.

“ನಮೋ ಟಿವಿ ಒಂದು ಸ್ಪೆಶಲ್ ಸರ್ವಿಸ್ ಆಗಿದೆ.... ಸ್ಪೆಶಲ್ ಸರ್ವಿಸಸ್ ಗೆ ಲೈಸನ್ಸ್ ಅಗತ್ಯವಿಲ್ಲ'' ಎಂದು ಹರಿತ್ ಅವರು ಸುದ್ದಿ ಸಂಸ್ಥೆ ಎನ್‍ ಡಿಟಿವಿ ಜತೆ ಮಾತನಾಡುತ್ತಾ ಹೇಳಿದ್ದಾರೆ.  “ಟಾಟಾ ಸ್ಕೈಯಲ್ಲಿರುವ ಯಾರಾದರೂ ಅದೊಂದು ನ್ಯೂಸ್ ಸರ್ವಿಸ್ ಎಂದು ಹೇಳಿದ್ದರೆ ಅದು ತಪ್ಪು'' ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಟಾಟಾ ಸ್ಕೈ, “ಈ  ಚಾನೆಲ್ ಅನ್ನು ಎಲ್ಲಾ ಚಂದಾದಾರರಿಗೆ ಆರಂಭಿಕ ಆಫರ್ ಆಧಾರದಲ್ಲಿ ನೀಡಲಾಗಿದೆ ಹಾಗೂ ಒಂದು ಚಾನೆಲ್ ಅನ್ನು ಡಿಲೀಟ್ ಮಾಡುವ ಆಪ್ಶನ್ ಇಲ್ಲ'' ಎಂದು ಹೇಳಿತ್ತು.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಈ ವಾಹಿನಿಯನ್ನು ಆರಂಭಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಹಿಂದೆ ಚುನಾವಣಾ ಆಯೋಗ ನಮೋ ಟಿವಿಯ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಮಾಹಿತಿ ಕೇಳಿತ್ತು.

ಈ 24 ಗಂಟೆಗಳ ಚಾನೆಲ್ ನಲ್ಲಿ  ಪ್ರಧಾನಿಯ ಹೆಸರಿನ ಆರಂಭಿಕ ಅಕ್ಷರಗಳು ಹಾಗೂ ಅವರ ಚಿತ್ರ ಲಾಂಛನವಾಗಿದ್ದು, ವಿವಿಧ ಡಿಟಿಎಚ್ ಹಾಗೂ ಕೇಬಲ್ ಟಿವಿಗಳಲ್ಲಿ ಲಭ್ಯವಿದೆ. ಈ ವಾಹಿನಿಯ ಒಡೆತನ ಯಾರಿಗೆ ಸೇರಿದ್ದು ಹಾಗೂ ಅದರ ಹಣಕಾಸಿನ ಮೂಲ ಯಾವುದೆಂದು ತಿಳಿದು ಬಂದಿಲ್ಲ.

ನಮೋ ಟಿವಿ ಮೂಲತಃ ಜಾಹೀರಾತು ವೇದಿಕೆಯಾಗಿದ್ದು ಅದು ಕೆಲ ಡಿಟಿಎಚ್ ಸೇವೆಗಳ ಭಾಗವಾಗಿದ್ದು ಅದಕ್ಕಾಗಿ ಯಾವುದೇ ಪರವಾನಿಗೆ ಅಗತ್ಯವಿಲ್ಲ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News