ಮೈತ್ರಿ ಧರ್ಮ ಪಾಲನೆಯಲ್ಲಿ ತಾರತಮ್ಯ ಸರಿಯಲ್ಲ: ಆರ್.ರಾಜೇಂದ್ರ

Update: 2019-04-04 11:08 GMT

ತುಮಕೂರು,ಎ.04: ಚುನಾವಣೆ ಸಂದರ್ಭದಲ್ಲಿ ಮೈತ್ರಿ ಧರ್ಮ ಪಾಲನೆಯ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತಾರತಮ್ಯವಿರಬಾರದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. 

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಪರ ಕೆಲಸ ಮಾಡಲು ಸಮ್ಮಿಶ್ರ ಸರಕಾರದ ಮಂತ್ರಿಗಳಾದ ಜಿ.ಟಿ.ದೇವೇಗೌಡರು ಒಪ್ಪುತ್ತಿಲ್ಲ. ಅವರ ವಿರುದ್ದ ಯಾವುದೇ ಕ್ರಮ ಆಗಿಲ್ಲ. ಬದಲಾಗಿ, ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪರ ಕೆಲಸ ಮಾಡಲು ಹಿಂದೇಟು ಹಾಕಿದ ಕಾಂಗ್ರೆಸ್ ಕಾರ್ಯಕರ್ತರು,ಮುಖಂಡರ ವಿರುದ್ದ ಪಕ್ಷದ ವಿರೋಧಿ ಚಟುವಟಿಕೆಯ ಹೆಸರಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ತಾರತಮ್ಯ ಸರಿಯಲ್ಲ. ಇದು ಮುಂದುವರೆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇರೆಯದೇ ಸಂದೇಶ ಕಳುಹಿಸಿದಂತಾಗುತ್ತದೆ. ರಾಷ್ಟ್ರಮಟ್ಟದಲ್ಲಿ ರಾಹುಲ್‍ ಗಾಂಧಿ ಅವರು ಪ್ರಧಾನಿಯಾಗಲು ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಹಾಲಿ ಸಂಸದರನ್ನು ಕಡೆಗಣಿಸಿ, ಮೈತ್ರಿಧರ್ಮದ ನಿರ್ಧಾರದಂತೆ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕಣಕ್ಕೆ ಇಳಿಸಲಾಗಿದೆ. ಅವರ ಪರ ಈಗಾಗಲೇ ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 7 ರಲ್ಲಿ ಡಿ.ಸಿ.ಎಂ. ಡಾ.ಪರಮೇಶ್ವರ್, ಜೆಡಿಎಸ್ ಪಕ್ಷದ ಸಚಿವರಾದ ಎಸ್.ಆರ್.ಶ್ರೀನಿವಾಸ್ ಹಾಗೂ ಇನ್ನಿತರ ಮುಖಂಡರ ಜೊತೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸಲಾಗಿದೆ. ಎಪ್ರಿಲ್ 8 ರಂದು ಮಧುಗಿರಿಯಲ್ಲಿಯೂ ಎರಡು ಪಕ್ಷಗಳ ಕಾರ್ಯಕರ್ತರ ಜಂಟಿ ಸಭೆಯನ್ನು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಕಾರ್ಯಕರ್ತರು ತಮ್ಮೊಳಗಿನ ವೈಮನಸ್ಸು ಮರೆತು ಒಂದಾಗಲು ಕಾಲಾವಕಾಶಬೇಕು. ಯುಗಾದಿ ಹಬ್ಬದ ನಂತರ ಜಿಲ್ಲೆಯಲ್ಲಿ ಎಲ್ಲರೂ ಒಗ್ಗೂಡಿ ಮಾಜಿ ಪ್ರಧಾನಿಗಳ ಗೆಲುವಿಗೆ ಶ್ರಮಿಸುವುದಾಗಿ ಆರ್.ರಾಜೇಂದ್ರ ತಿಳಿಸಿದರು.

ಇಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ,ಯುವ ಕಾಂಗ್ರೆಸ್,ಎನ್.ಎಸ್.ಯು.ಐ ಹಾಗೂ ಇನ್ನಿತರ ವಿಭಾಗಗಳ ಹೆಚ್.ಡಿ.ಡಿ ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಇಂದು ಎಲ್ಲರೂ ಒಗ್ಗೂಡಿ, ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇ ಗೌಡರ ಗೆಲುವಿಗೆ ಶ್ರಮಿಸಲು ಮುಂದಾಗಿದ್ದೇವೆ. ಇದೇ ಉತ್ಸಾಹ ಮತ್ತು ಹುಮ್ಮಸ್ಸನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆಯೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ತೋರಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮೈತ್ರಿ ಎಂಬು ದಕ್ಕೆ ಅರ್ಥವಿರುವುದಿಲ್ಲ. ಮುಂದಿನ 10ನೇ ತಾರಿಖು ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಮಧುಗಿರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಚಾರ ಸಭೆ ನಡೆಯಲಿದೆ. ಆ ಸಭೆಗೆ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರು ಭಾಗವಹಿಸಲಿದ್ದಾರೆ. ಅವರಿಗೆ ಕೊಂಚ ಬೇಸರ ಆಗಿದೆ. ಆ ಹಿನ್ನೆಲೆಯಲ್ಲಿ ಇದುವರೆಗೆ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಮುಂದಿನ ದಿನಗಳಲ್ಲಿ ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆರ್.ರಾಜೇಂದ್ರ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಪಕ್ಷದ ಹೈ ಕಮಾಂಡ್ ತೀರ್ಮಾನದಂತೆ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಶಿ ಹುಲಿಕುಂಟೆ ಮಠ್,ಮುಖಂಡರಾದ ಭರತ್, ಶ್ರೀನಿವಾಸ್, ಎನ್.ಎಸ್.ಯು.ಐ.ನ ಉಲ್ಲಾಸ್, ಮುಸ್ತಾಕ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News