​ಚುನಾವಣೆ ಬಳಿಕ ತುಮಕೂರಲ್ಲಿ ಕಾಂಗ್ರೆಸ್ ಮಾಯ: ವಿ.ಸೋಮಣ್ಣ

Update: 2019-04-04 11:20 GMT

ತುಮಕೂರು,ಎ.04: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ಸಂಪೂರ್ಣ ಮಾಯವಾಗಲಿದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. 

ನಗರದ ಸಿದ್ದಗಂಗಾ ಮಠಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ಪಿ ಸೂರ್ಯ ಅವರೊಂದಿಗೆ ಇಂದು ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯೇ ಇಲ್ಲ. ಹೀಗಿರುವಾಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವುದಿರಲಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಬೇರೇ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು. 

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬಿಜೆಪಿ ಬಗ್ಗೆ ಮಾತನಾಡುವ ಮುನ್ನ ತಮ್ಮ ಪಕ್ಷದ ಸ್ಥಿತಿಗತಿ ಏನಾಗಿದೆ ಎಂಬುದನ್ನು ಒಮ್ಮೆ ಅವಲೋಕಿಸಿ ನೋಡಲಿ ಎಂದು ತಿರುಗೇಟು ನೀಡಿದ ಅವರು,ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ. ಚುನಾವಣೆಯ ಹೊಸ್ತಿಲಲ್ಲಿದ್ದರೂ ಇನ್ನು ಯಾರು ಪ್ರಧಾನಿ ಅಭ್ಯರ್ಥಿ ಎಂಬ ಗೊಂದಲವೇ ಬಗೆಹರಿದಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಮೋದಿಯವರೇ ಯಜಮಾನ. ಅವರೇ ನಮ್ಮ ಮುಂದಿನ ಪ್ರಧಾನಿ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಪುಲ್ಮಾಮಾ ಘಟನೆಯಾದ ಕೇವಲ 15 ದಿನದಲ್ಲಿ ಭಾರತೀಯವರ ಬುದ್ಧಿವಂತಿಕೆ, ತಾಕತ್ತು ಏನೆಂದು ಇಡೀ ಜಗತ್ತಿದೆ ತೋರಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಧೀಮಂತ ನಾಯಕ ಮತ್ತೆ ಪ್ರಧಾನಿಯಾಗಬೇಕು ಎಂಬುದು ಇಡೀ ದೇಶದ ಜನರ ಒತ್ತಾಸೆಯಾಗಿದೆ ಎಂದರು. 

ಬೆಂಗಳೂರು ದಕ್ಷಿಣ, ತುಮಕೂರು ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.

ಲೋಕಸಭಾ ಚುನಾವಣೆ ಪ್ರಯುಕ್ತ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎ.12 ರಂದು ನಗರಕ್ಕೆ ಆಗಮಿಸಲಿದ್ದು, ರೋಡ್ ಶೋ ನಡೆಸಲಿದ್ದಾರೆ. ಎ. 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಚಿತ್ರದುರ್ಗದಲ್ಲಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸುವರು.

ತಾವು ಈಗಾಗಲೇ ಜಿಲ್ಲೆಯ ಹಲವೆಡೆ ಹತ್ತು ಹಲವಾರು ಸಭೆಗಳನ್ನು ನಡೆಸಿ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದು, ಎಲ್ಲೆಡೆ ಮೋದಿ ಪರ ಬೆಂಬಲ ವ್ಯಕ್ತವಾಗಿದೆ. ದೇಶದ ಸುಭದ್ರತೆಗೆ ನರೇಂದ್ರ ಮೋದಿಯವರ ಅಗತ್ಯತೆಗಳನ್ನು ಜನರೇ ಪ್ರತಿಪಾದಿಸುತ್ತಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಹರ್ಷವರ್ಧನಗೌಡ, ಅರುಣ್ ಸೋಮಣ್ಣ, ಕೊಪ್ಪಲ್ ನಾಗರಾಜು, ಹೆಬ್ಬಾಕ ರವಿಶಂಕರ್, ಮಲ್ಲಿಕಾರ್ಜುನಯ್ಯ, ಶಿವಕುಮಾರ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News