ಯುವಕರನ್ನು ಮುನ್ನೆಲೆಗೆ ತರುವುದು ಬಿಜೆಪಿ ಪರಂಪರೆ: ತೇಜಸ್ವಿ ಸೂರ್ಯ

Update: 2019-04-04 11:22 GMT

ತುಮಕೂರು,ಎ.04:ಯುವಕರನ್ನು ಬೆಳೆಸಿ ಮುನ್ನೆಲೆಗೆ ತರುವುದು ಬಿಜೆಪಿ ಪರಂಪರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಹಿಂದಿನಿಂದಲೂ ಯುವ ಸಮೂಹವನ್ನು ಬೆಳೆಸಿ ರಾಜಕೀಯವಾಗಿ ಶಕ್ತಿ ತುಂಬುವ ಕಾಯಕ ನಡೆಯುತ್ತಲ್ಲೇ ಬಂದಿದೆ ಎಂದರು. 

ಮಾಜಿ ಪ್ರಧಾನಿ ದಿ.ವಾಜಪೇಯಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಪಕ್ಷದಲ್ಲಿ 2 ಮತ್ತು 3ನೇ ಹಂತದಲ್ಲಿ ಗುರುತಿಸಿಕೊಂಡಿದ್ದ ಯುವಕರನ್ನು ಬೆಳೆಸಿ ರಾಜಕೀಯವಾಗಿ ಮುನ್ನೆಲೆಗೆ ತಂದಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಹ ಹಿರಿಯ ನಾಯಕರ ಪದ್ದತಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಪಕ್ಷದ ಹೈಕಮಾಂಡ್ ಕೈಗೊಂಡ ತೀರ್ಮಾನಕ್ಕೆ ಬದ್ಧನಾಗಿ ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ ಎಂದು ಅವರು ಹೇಳಿದರು. 

ಯುವ ಸಮೂಹವೇ ಬಿಜೆಪಿ ಪಕ್ಷದ ದೊಡ್ಡ ಶಕ್ತಿ. ನಾನು ಸಹ ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದೇನೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತಕುಮಾರ್ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲೇ ಕ್ಷೇತ್ರದ ಅಭಿವೃದ್ಧಿ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ.ಸಿದ್ದಗಂಗಾ ಮಠ ಲಕ್ಷಾಂತರ ಬಡ ಮಕ್ಕಳ ಬದುಕಿನಲ್ಲಿ ಬೆಳಕು ನೀಡಿರುವ ಶ್ರೇಷ್ಠ ಜಾಗ. ಹಾಗಾಗಿ ಈ ಪುಣ್ಯ ಕ್ಷೇತ್ರಕ್ಕೆ ಬಂದು ಲಿಂ. ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು. 

ಈ ಪವಿತ್ರ ಸ್ಥಳಕ್ಕೆ ಬಂದು ಆಶೀರ್ವಾದ ಪಡೆದರೆ ರಾಜಕೀಯವಾಗಿ ಒಂದು ರೀತಿಯ ಪ್ರೇರಣೆ ದೊರೆಯಲಿದೆ ಎಂಬುದು ನಂಬಿಕೆ. ರಾಜಕೀಯ ಸನ್ಯಾಸ ಯಾವ ರೀತಿ ಇರಬೇಕು ಎಂಬುದನ್ನು ಅರಿಯಲು ಇದು ಪ್ರೇರಣಾ ಸ್ಥಳ ಎಂದ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ  ಸಿದ್ದಗಂಗಾ ಕ್ಷೇತ್ರದ ಬಗ್ಗೆ ಬಹಳ ದೊಡ್ಡ ಅಭಿಮಾನ, ಗೌರವ ಇಟ್ಟುಕೊಂಡಿರುವ ಜನ ಇದ್ದಾರೆ. ಅವರೆಲ್ಲರ ಪರವಾಗಿ ನಾನು ಶ್ರೀಕ್ಷೇತ್ರಕ್ಕೆ ಬಂದು ಕೃತಜ್ಞತೆ ಸಲ್ಲಿಸಿದ್ದೇನೆ ಎಂದರು.  

ಈ ಸಂದರ್ಭದಲ್ಲಿ ಮಾಜಿ ಸಚಿವ ವಿ. ಸೋಮಣ್ಣ, ಹರ್ಷವರ್ಧನಗೌಡ, ಅರುಣ್ ಸೋಮಣ್ಣ, ಕೊಪ್ಪಲ್ ನಾಗರಾಜು, ಹೆಬ್ಬಾಕ ರವಿಶಂಕರ್, ಮಲ್ಲಿಕಾರ್ಜುನಯ್ಯ, ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News