ಭೋವಿ ಸಮಾಜದ ಒಮ್ಮತದ ಬೆಂಬಲ ಬಿಜೆಪಿಗೆ: ಪೆದ್ದಕಾಶ್ಟಿ ವೆಂಕಟಮುನಿ

Update: 2019-04-04 11:33 GMT

ಕೋಲಾರ : ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಭೋವಿ ಸಮಾಜ ಸೇರಿದಂತೆ ಹಲವಾರು ಉಪಜಾತಿಗಳಿಗೆ ಅನ್ಯಾಯವೆಸಗಲು ಸಂಸದ ಕೆ.ಹೆಚ್.ಮುನಿಯಪ್ಪ ಹಠ ಹಿಡಿದಿದ್ದಾರೆ. ಅವರ ವಿರುದ್ಧ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಚಲಾವಣೆ ಮಾಡಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಬೆಂಬಲ ನೀಡಿ ಎಂದು ಭೋವಿ ಸಮಾಜದ ಜಿಲ್ಲಾ ಹಿರಿಯ ರಾಜಕೀಯ ಮುತ್ಸದಿ ಪೆದ್ದಕಾಶ್ಟಿ ವೆಂಕಟಮುನಿ ಹೇಳಿದರು. 

ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಕೆ.ಹೆಚ್.ಮುನಿಯಪ್ಪ ಸತತವಾಗಿ ಭೋವಿ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಸದಾಶಿವ ಆಯೋಗದ ವರದಿಗೆ ಮಾದಿಗ ದಂಡೋರ ಮುಖಾಂತರ ಒತ್ತಡ ತಂದು ತರಾತುರಿಯಲ್ಲಿ ಆಯೋಗದ ವರದಿ ಸಲ್ಲಿಸುವಂತೆ ಮಾಡಿ, ಅನುಷ್ಠಾನಕ್ಕೆ ಹಠಮಾಡುತ್ತಿದ್ದಾರೆ. ಸದಾಶಿವ ಆಯೋಗದ ವರದಿಗೆ ಪರಿಶಿಷ್ಠ ಜಾತಿಯ ಹಲವು ಸಮುದಾಯಗಳ ವಿರೋಧವಿದ್ದರೂ ಸಹ ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿರುತ್ತಾರೆ ಇದರಿಂದ ಭೋವಿ ಸಮಾಜದ ಅಭಿವೃದ್ಧಿಗೆ ತಡೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರ ಉಮೇದುವಾರಿಕೆಯನ್ನು ವಿರೋಧಿಸಿ ಬಿಜೆಪಿಗೆ ಮತ ಚಲಾಯಿಸಲು ಸಮಾಜ ಜನತೆ ಒಮ್ಮತದ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು. 

ಹಿರಿಯ ಮುಖಂಡ ಸಿ.ವಿ.ಗೋಪಾಲ್ ಮಾತನಾಡಿ, ಸಂಸದ ಮುನಿಯಪ್ಪನವರ ಗೆಲುವಿಗೆ ಇಲ್ಲಿಯವರೆಗೆ ಭೋವಿ ಸಮಾಜ ನಿಷ್ಠೆಯಿಂದ ದುಡಿದರೂ, ತೆರೆಮರೆಯಲ್ಲಿ ಭೋವಿ ಸಮಾಜದ ವಿರುದ್ಧ ಕತ್ತಿ ಮಸಿದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಸಮಾಜ ಏಳಿಗೆಗೆ ಅಡ್ಡಲಾಗಿರುವ ಸಂಸದ ಕೆ.ಹೆಚ್.ಮುನಿಯಪ್ಪನವರನ್ನು ಚುನಾವಣೆಯಲ್ಲಿ ಸೋಲಿಸಲು ಮುಖಪರಿಚಯವಿಲ್ಲದಿದ್ದರೂ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್.ಮುನಿಸ್ವಾಮಿಯವರಿಗೆ ತಮ್ಮ ಸಮುದಾಯ ಮತ ಚಲಾಯಿಸಿ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದರು.

ಜೆಡಿಎಸ್ ಮುಖಂಡ ಶ್ರೀಕೃಷ್ಣ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಮುನಿಯಪ್ಪನವರು ಸಂಸದರಾಗಿ ಮೆರೆಯಲು ಅವಕಾಶ ಮಾಡಿಕೊಟ್ಟಿದ್ದೇ ಭೋವಿ ಸಮಾಜ, ಆದರೆ ಮುನಿಯಪ್ಪನವರಿಗೆ ಸ್ವಲ್ಪವೂ ನಿಯತ್ತು ಇಲ್ಲ, ಅವರು ಸಮಾಜವನ್ನು ಒಡೆದು ಸ್ವಾರ್ಥಕ್ಕಾಗಿ ಮಾದಿಗ ಸಮುದಾಯದ ಹೆಸರಿನಲ್ಲಿ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸ್ವತಃ ಮಾದಿಗ ಸಮುದಾಯಕ್ಕೆ ವಿರೋಧಿಯಾಗಿದ್ದಾರೆ, ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಭೋವಿ ಸಮುದಾಯ ತಕ್ಕಶಾಸ್ತಿ ಮಾಡುತ್ತದೆ ಎಂದರು.

ಜಿಲ್ಲಾ ಭೋವಿ ಯುವ ವೇದಿಕೆ ಅಧ್ಯಕ್ಷ ಎಲ್.ಜಿ.ಮುನಿರಾಜು ಮಾತನಾಡಿ, ಸಂಸದ ಕೆ.ಹೆಚ್.ಮುನಿಯಪ್ಪ ಭೋವಿ ಸಮಾಜವನ್ನು ತುಳಿಯುವ ಸಲುವಾಗಿ ಹಳ್ಳಿಯಿಂದ ಡೆಲ್ಲಿಯವರೆಗೆ ಒತ್ತಡ ಹೇರಿ ಸದಾಶಿವ ಆಯೋಗದ ವರದಿ ಜಾರಿಗೆ ಕೆಲಸ ಮಾಡುತ್ತಿದ್ದಾರೆ. ಭೋವಿ ಸಮಾಜದ ಜೊತೆಗೆ, ಚೆನ್ನದಾಸರಿ, ದಾಸರಿ, ಬೈರಾಗಿ, ಬುಡ್ಗಜಂಗಮ ಮುಂತಾದ ಸಮುದಾಯಗಳನ್ನು ಸಹ ತುಳಿಯುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಈಗಾಗಲೇ ಭೋವಿ ಕುಲ ಗುರುಗಳಾದ ಶ್ರೀ ಶ್ರೀ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ ಆದೇಶ ಮೇರೆಗೆ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿ ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯ ಮಾಡಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಂಸದ ಮುನಿಯಪ್ಪ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ಮತ ನೀಡುವ ಮೂಲಕ ಮುನಿಯಪ್ಪನವರನ್ನು ಮನೆಗೆ ಕಳುಹಿಸಲು ಭೋವಿ ಸಮುದಾಯ ಒಮ್ಮತದಿಂದ ನಿರ್ಧಾರ ಮಾಡಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಭೋವಿ ಸಮಾಜದ ಪ್ರಮುಖರಾದ ಡಾ.ಶಿವಣ್ಣ, ಬಂಗಾರಪೇಟೆ ಜೆ.ಸಿ.ಬಿ ನಾರಾಯಣಪ್ಪ, ಚೌಡಪ್ಪ, ಚಿಂತಾಮಣಿ ಮಂಜುನಾಥ್, ವರದೇನಹಳ್ಳಿ ವೆಂಕಟೇಶ್, ಪರಮೇಶ್ ಚಿನ್ನಪ್ಪ, ಪ್ರದೀಪ್, ಶ್ರೀನಾಥ್, ಬೈರಸಂದ್ರ ಪ್ರಕಾಶ್ ಭಾಗವಹಿಸಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News