ಮಹಿಳೆಯ ಪ್ರಾಣಕ್ಕೆ ಅಪಾಯವಿದ್ದಲ್ಲಿ 20ನೇ ವಾರದಲ್ಲೂ ಗರ್ಭಪಾತಕ್ಕೆ ಅವಕಾಶ

Update: 2019-04-04 15:18 GMT

ಮುಂಬೈ,ಎ.4: ಗರ್ಭಿಣಿಯ ಪ್ರಾಣಕ್ಕೆ ಅಪಾಯ ಒಡ್ಡುವಂತಿದ್ದಲ್ಲಿ ನೋಂದಾಯಿತ ವೈದ್ಯರು 20ನೇ ವಾರದಲ್ಲೂ ನ್ಯಾಯಾಲಯದ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಬಹುದು ಎಂದು ಬಾಂಬೆ ಉಚ್ಚ ನ್ಯಾಯಾಲಯ ತಿಳಿಸಿದೆ.

ಗರ್ಭವು 20 ವಾರಗಳನ್ನು ಮೀರಿದ್ದು ಅದನ್ನು ಉಳಿಸುವುದರಿಂದ ತನಗೆ ಅಥವಾ ತನ್ನ ಮಗುವಿಗೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಅಪಾಯವಿದೆ ಎಂದು ಗರ್ಭಿಣಿ ಭಾವಿಸಿದರೆ ಆ ಸದಂರ್ಭದಲ್ಲಿ ಗರ್ಭಪಾತ ಮಾಡಿಸಲು ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಎ.ಎಸ್ ಒಕ ಮತ್ತು ಎಂ.ಎಸ್ ಸೊನಕ್ ಅವರ ವಿಭಾಗೀಯ ಪೀಠ ಬುಧವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ. 20 ವಾರಗಳನ್ನು ಮೀರಿರುವ ಗರ್ಭವನ್ನು ತೆಗೆಯಲು ಬಯಸುವ ಮಹಿಳೆಯರನ್ನು ಪರೀಕ್ಷೆ ನಡೆಸಲು ಮೂರು ತಿಂಗಳೊಳಗಾಗಿ ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವಂತೆ ಪೀಠ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.

ವೈದ್ಯಕೀಯ ಗರ್ಭಪಾತ ಕಾಯ್ದೆ (ಎಂಟಿಪಿ)ಯ ನಿಬಂಧನೆಯ ಪ್ರಕಾರ 20 ವಾರಗಳ ನಂತರ ಗರ್ಭವನ್ನು ತೆಗೆದುಹಾಕುವಂತಿಲ್ಲ. ಭ್ರೂಣದ ಅಸಹಜ ಬೆಳವಣಿಗೆ ಮತ್ತು ಗರ್ಭಧಾರಣೆಯನ್ನು ಮುಂದುವರಿಸುವುದರಿಂದ ಮಾನಸಿಕ ಮತ್ತು ದೈಹಿಕ ಕ್ಷೋಭೆಯುಂಟಾಗುತ್ತಿದೆ ಎಂಬ ನೆಲೆಯಲ್ಲಿ ಗರ್ಭವನ್ನು ತೆಗೆಯಲು ಅನುಮತಿ ನೀಡುವಂತೆ ಕೋರಿ ಮಹಿಳೆಯರು ನ್ಯಾಯಾಲಯದಲ್ಲಿ ಹಾಕುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News