ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧಿಕಾರ ವಿಕೇಂದ್ರಿಕರಣ: ಕಪಿಲ್ ಸಿಬಲ್

Update: 2019-04-04 15:25 GMT

ಬೆಂಗಳೂರು, ಎ.4: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ಅಧೀನದ ಇಲಾಖೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ತರಲಿದ್ದೇವೆ. ದೇಶದ ಆರು ಕಡೆ ವಿಶೇಷ ನ್ಯಾಯಾಲಯ ಬೆಂಚ್ ಸ್ಥಾಪನೆ ಸೇರಿದಂತೆ ಕೇಂದ್ರದ ಹಿಡಿತದಲ್ಲಿರುವ ಅಧಿಕಾರವನ್ನು ಸಮಾನಾಂತರವಾಗಿ ವಿಕೇಂದ್ರಿಕರಣ ಮಾಡಲಿದ್ದೇವೆಂದು ಮಾಜಿ ಸಚಿವ ಕಪಿಲ್ ಸಿಬಲ್ ತಿಳಿಸಿದರು.

ಗುರುವಾರ ಎಐಸಿಸಿಯಿಂದ ಬಿಡುಗಡೆಯಾದ ಚುನಾವಣಾ ಪ್ರಣಾಳಿಕೆಯನ್ನು ನಗರದ ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಬಡವರು ಬಡವರಾಗಿ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಹಣ ಮಾಡಿಕೊಂಡವರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಶೇ.70ರಷ್ಟು ಮಂದಿ ಸರಾಸರಿ 10 ಸಾವಿರ ರೂ. ಮಾತ್ರ ಆದಾಯ ಹೊಂದಿದ್ದಾರೆ. ಮಾತಿನಿಂದ ಶಾಸನ ನಡೆಯುವುದಿಲ್ಲ. ಯುಪಿಎ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ಆದರೆ, ಈಗ ಐದು ವರ್ಷ ದೇಶ ಮುನ್ನಡೆಸಿದ ಮೋದಿ ಸರಕಾರ ಎಲ್ಲವನ್ನೂ ಕಡೆಗಣಿಸಿದೆ ಎಂದು ಅವರು ಹೇಳಿದರು.

ನಾವು ನಮ್ಮ ಪ್ರಣಾಳಿಕೆಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 12ನೆ ತರಗತಿಯವರೆಗೆ ವಿಸ್ತರಿಸುತ್ತೇವೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ಲಭಿಸಲಿದೆ. ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡುತ್ತೇವೆ. ಆರೋಗ್ಯದ ಬಗ್ಗೆ ಗಮನ ಹರಿಸಿದ್ದೇವೆ. ಉಚಿತ ಔಷಧ ನೀಡುವ ಕಾರ್ಯವನ್ನು ಕೆಲ ವರ್ಗದವರಿಗೆ ನೀಡಿದ್ದೇವೆ. ನಮ್ಮ ಬದ್ಧತೆ ಹೆಚ್ಚಿದೆ. ಇದರಿಂದಲೇ ಹೇಳಿದ್ದನ್ನೇ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿದ್ದೇವೆ ಎಂದರು.

ಆರ್ಥಿಕ ಕುಸಿತ: ಪ್ರಧಾನಿ ಮೋದಿ ಸರಕಾರ ನಡೆದುಕೊಂಡ ರೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. ನೋಟ್ ರದ್ದತಿಯಿಂದ ಸಾಮಾನ್ಯ ಜನರ ಜೀವನಕ್ಕೆ ಹೊಡೆತ ಬಿದ್ದಿದೆ. ಕೇಂದ್ರ ಸರಕಾರದ ಕಳೆದ 5 ವರ್ಷದಲ್ಲಿ ಸಾಮಾಜಿಕ ನ್ಯಾಯ ಯಾರಿಗೂ ಸಿಕ್ಕಿಲ್ಲ. ಬದಲಾಗಿ ಸಾಮಾಜಿಕ ಅನ್ಯಾಯ ಆಗಿದೆ. ನೋಟು ಅಮಾನ್ಯೀಕರಣದಿಂದ ಬಡ ಜನರ ಜೀವನ ಹಾಳಾಗಿದೆ. ಮೋದಿಯವರ ಈ ತೀರ್ಮಾನದಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ ಎಂದು ಅವರು ಆರೋಪಿಸಿದರು.

ನಮ್ಮ ಪ್ರಣಾಳಿಕೆಯಿಂದ ದೇಶವನ್ನು ಬದಲಾವಣೆ ಮಾಡೋಕೆ ಆಗುತ್ತದೆ. ಹೀಗಾಗಿ 72 ಸಾವಿರ ರೂ. ಬಡವರಿಗೆ ನೀಡುವ ತೀರ್ಮಾನ ಮಾಡಿದ್ದು, ಸ್ವಾಮಿನಾಥನ್ ವರದಿಯನ್ನು ನಾವು ಜಾರಿ ಮಾಡುತ್ತೇವೆ. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ನಾವು ಕೊಟ್ಟ ಭರವಸೆಯನ್ನು ಖಂಡಿತ ಈಡೇರಿಡುತ್ತೇವೆ. ಒಂದು ವರ್ಷದಲ್ಲಿ 4 ಲಕ್ಷ ಉದ್ಯೋಗ ಅವಕಾಶ ಕಲ್ಪಿಸುತ್ತೇವೆ. ಇದು ಬರಿ ಬಾಯಿ ಮಾತಲ್ಲ. ಮಾಡಿ ತೋರಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News