ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿದೆ: ಶಾಸಕ ನರೇಂದ್ರ

Update: 2019-04-04 18:28 GMT

ಹನೂರು: ಸಮಾಜದಲ್ಲಿರುವ ಸರ್ವ ಜನಾಂಗವನ್ನು ಸಮಾನಾಗಿ ನೋಡುವ ನಿಜವಾದ ಜಾತ್ಯಾತೀತ ಪಕ್ಷ  ದೇಶದಲ್ಲಿ ಇದ್ದರೆ ಅದು  ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ನರೇಂದ್ರ ತಿಳಿಸಿದರು. 

ತಾಲೂಕಿನ ಶೆಟ್ಟಳ್ಳಿ, ಎಲ್ಲೆಮಾಳ, ಕೌದಳ್ಳಿ, ಅಜ್ಜಿಪುರ, ಬಸಪ್ಪನದೊಡ್ಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಹಿಂದುಳಿದ ವರ್ಗ, ಕ್ರೈಸ್ತರು, ಮುಸ್ಲಿಂ ಜನಾಂಗವನ್ನು ಕಡೆಗಣಿಸುತ್ತಿದ್ದು ಕೇವಲ ಹಿಂದುತ್ವವನ್ನು ಹರಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಸರ್ವ ಧರ್ಮ ಮತ್ತು ಸರ್ವ ಜಾತಿ , ವರ್ಗಗಳನ್ನು ಸಮಾನವಾಗಿ ನೋಡಿಕೊಳ್ಳುವ ನಿಜವಾದ ಜಾತ್ಯಾತೀತ ಪಕ್ಷ ಆಗಿದೆ ಎಂದರು. 

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಲೋಕಸಭಾ ಪೂರ್ವದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಜನರಿಗೆ ನಾವೇನು ಮಾಡುತ್ತೇವೆ ಎಂಬ ಭರವಸೆ ನೀಡುತ್ತಿಲ್ಲ, ಏಕೆಂದರೆ ಕಳೆದ ಬಾರಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿ ಕೇವಲ 27 ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಉದ್ಯೋಗ ನೀಡಿ ಎಂದು ಕೇಳಿದರೆ “ಪಕೋಡ ಮಾರಿ”  ಎಂದು ಹೇಳುತ್ತಾರೆ. ಪಕೋಡ ಮಾರಲು ಪದವಿ ಮತ್ತು ಸ್ನಾತ್ತಕೋತ್ರ ಪದವಿ ಓದಬೇಕೆ ಎಂದು ಪ್ರಶ್ನಿಸಿದರು.

ರೂ 300 ರಿಂದ 400 ಆಸುಪಾಸಿನಲ್ಲಿದ್ದ ಎಲ್ಪಿಜಿ ಗ್ಯಾಸ್ ಈಗ 1000 ರೂ ತನಕ ಬೆಲೆ ಏರಿಸಲಾಗಿದೆ. ಪಟ್ರೋಲ್ ಮತ್ತು ಡೀಸೆಲ್ ದರ ದುಬಾರಿಯಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಬಿಪಿಎಲ್ ಕುಟುಂಬದವರಿಗೆ ವಾರ್ಷಿಕ 72 ಸಾವಿರ ಕನಿಷ್ಟ ಆದಾಯ ಖಾತರಿ  ಹಾಗು ನರೇಗಾ ಯೊಜನೆಯಲ್ಲಿ 150 ದಿನಗಳ ಉದ್ಯೋಗ ಖಾತ್ರಿ ನೀಡಲಾಗುವುದು ಎಂದು ಹೇಳಿದೆ ಆದರೆ ಬಿಜೆಪಿ ಪಕ್ಷವು ಇದು ಹೇಗ ಸಾದ್ಯ ಎಂದು ಲೇವಡಿ ಮಾಡಿದೆ. ಆದರೆ ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ವಿದೇಶಿ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಕಪ್ಪುಹಣ ವಾಪಸ್ಸು ನಮ್ಮ ದೇಶಕ್ಕೆ ತಂದು ಪ್ರತಿ ಕುಟುಂಬಕ್ಕೆ 15 ಲಕ್ಷ ಹಣ ಹಾಕಲಾಗುವುದು ಎಂದು ಹೇಳಿದ್ದರು, ಎಲ್ಲಿ 15 ಲಕ್ಷ ಹಣ ಹಾಕಿದರು ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರವರ ಸರ್ಕಾರ ಸಹಕಾರ ಸಂಘಗಳ ಪ್ರತಿ ರೈತನ 50 ಸಾವಿರ ಸಾಲ ಮನ್ನಾ ಹಾಗು ಸಮ್ಮಿಶ್ರ ಸರ್ಕಾರ 1 ಲಕ್ಷದ ವರೆಗೆ ಸಾಲ ಮನ್ನಾ ಮಾಡಿದ್ದಾರೆ. ಅದೇ ಮೋದಿಯವರ ಬಳಿ ಸರ್ವ ಪಕ್ಷಗಳ ಸದಸ್ಯ ಆಯೋಗವನ್ನು ಸಿದ್ದರಾಮ್ಯಯ್ಯರವರು ತೆಗೆದು ಕೊಂಡು ಹೋಗಿ, ರೈತರ ಸಾಲ ಮನ್ನಾ ಮಾಡಿ, ಬರಗಾಲ ಇದೆ ಎಂದು ಕೇಳಿದಾಗ ಯಾವ ಸಹಾಯವನ್ನು ಮೋದಿ ಮಾಡಲಿಲ್ಲ , ಅದೇ ಕೆಲವು ಶ್ರೀಮಂತ ಲೂಟಿಕೋರರು ಸಾಲ ಮಾಡಿ ದೇಶ ಬಿಟ್ಟು ಓಡಿ ಹೋಗಿದ್ದಾರೆ, ಅವರ ಸಾಲ ಮನ್ನಾ ಮಾಡಲು ಮೋದಿಯವರು ಮುಂದಾಗಿದ್ದಾರೆ ಎಂದು ಆರೋಪ ಮಾಡಿದರು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜು,  ಮಾಜಿ ಸದಸ್ಯ ಕೊಪ್ಪಾಳಿ ಮಾದೇವ, ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ರಾಮಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಈಶ್ವರ್, ಹನೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆಂಪಯ್ಯ, ತಾಪಂ ಅದ್ಯಕ್ಷ ರಾಜೇಂದ್ರ,ಸದಸ್ಯ ರಾಜು,ಸಿದ್ದರಾಜು ಮುಖಂಡರಾದ ಚಾಂದ್‍ಪಾಷ, ಪೆದ್ದನ್‍ಪಾಳ್ಯಮಣಿ ಮೊಹಬೂಬ್, ಮಹದೇವ್,ನಟರಾಜು, ಶಾಹುಲ್‍ ಅಹಮದ್, ಗ್ರಾಪಂ ಸದಸ್ಯ ಮುನಿಸ್ವಾಮಿ ಸೇರಿದಂತೆ ಮುಂತಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News