ಜೆಎನ್‍ಯು ಪ್ರಕರಣ: ರಹಸ್ಯವಾಗಿ, ಅವಸರದಿಂದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು ಎಂದ ದಿಲ್ಲಿ ಸರಕಾರ

Update: 2019-04-05 11:24 GMT

ಹೊಸದಿಲ್ಲಿ, ಎ.5: ಜೆಎನ್ ಯು ಪ್ರಕರಣ ಕುರಿತಂತೆ ದಿಲ್ಲಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಗೌಪ್ಯವಾಗಿ ಹಾಗೂ ಅವಸರದಿಂದ ಸಂಬಂಧಿತ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸಲ್ಲಿಸಿದ್ದರೆಂದು ದಿಲ್ಲಿ ಸರಕಾರ ಪಟಿಯಾಲ ಹೌಸ್ ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.

ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ವಿರುದ್ಧದ ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಒಂದು ತಿಂಗಳಿಗೂ ಅಧಿಕ ಸಮಯ ತಗಲುವುದು ಎಂದೂ ಸರಕಾರ ತಿಳಿಸಿದೆ.

ಒಂದು ನಿರ್ದಿಷ್ಟ ಸಮಯ ಮಿತಿ ಉಲ್ಲೇಖಿಸಿ ಸರಿಯಾದ ಉತ್ತರ ನೀಡುವಂತೆ ನ್ಯಾಯಾಲಯ ಈ ಹಿಂದೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

ದಿಲ್ಲಿ ಪೊಲೀಸರು ದಿಲ್ಲಿ ಸರಕಾರದಿಂದ ಅನುಮತಿ ಕೋರಿದ್ದರೆಂದು ಈ ಹಿಂದೆ ತಿಳಿಸಿದ್ದ ದಿಲ್ಲಿ ಪೊಲೀಸರ ವಿಶೇಷ ಸೆಲ್ ಡಿಸಿಪಿ ಪ್ರಮೋದ್ ಕುಶ್ವಾಹ, ಅದೇ ಸಮಯ ದೋಷಾರೋಪ ಪಟ್ಟಿಯನ್ನು ಆಡಳಿತಾತ್ಮಕ ಪ್ರಕ್ರಿಯೆಯಾದ ಅನುಮತಿ ಪಡೆಯದೆಯೇ ಸಲ್ಲಿಸಬಹುದು ಎಂದಿದ್ದರು.

ಫೆಬ್ರವರಿ 9, 2016ರಂದು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ನಡೆದ ಮೆರವಣಿಗೆಯ ನೇತೃತ್ವ ವಹಿಸಿದ್ದ ಕನ್ಹಯ್ಯಾ ದೇಶವಿರೋಧಿ ಘೋಷಣೆಗಳನ್ನು ಬೆಂಬಲಿಸಿದ್ದರು ಎಂದು ಜನವರಿ 14ರಂದು ಪೊಲೀಸರು ನ್ಯಾಯಾಲಯದಲ್ಲಿ ಕನ್ಹಯ್ಯ ಮತ್ತಿತರರ ವಿರುದ್ಧ ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News