ಮೂಲಸೌಲಭ್ಯ ಮರೀಚಿಕೆ: ನಕ್ಸಲ್ ಪೀಡಿತ ಗುಳ್ಯಾ ಗ್ರಾಮದ ಗಿರಿಜನರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Update: 2019-04-05 12:19 GMT

ಚಿಕ್ಕಮಗಳೂರು, ಎ.4: ನಕ್ಸಲ್ ಪೀಡಿತ ಗ್ರಾಮವಾಗಿದ್ದರೂ ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಗುಳ್ಯಾ ಗ್ರಾಮದ ನಿವಾಸಿಗಳು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಕಳಸ ಹೋಬಳಿ ವ್ಯಾಪ್ತಿಯ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಗುಳ್ಯಾ ಗ್ರಾಮ ನಕ್ಸಲ್ ಪೀಡಿತ ಗ್ರಾಮವಾಗಿದ್ದು, ಈ ಭಾಗದಲ್ಲಿ ಗಿರಿಜನರು ಹೆಚ್ಚು ವಾಸವಿದ್ದಾರೆ. ವಿಶೇಷವಾಗಿ ಸಂಸೆ ಗ್ರಾಮಕ್ಕೆ ಸಮೀಪದಲ್ಲಿರುವ ಗುಳ್ಯಾ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮದ ನಿವಾಸಿಗಳು ಆರೋಪಿಸಿದ್ದು, ಸಂಸೆ ಗ್ರಾಮದಿಂದ ಗುಳ್ಯಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸದ್ಯ ಮಣ್ಣಿನ ಕಚ್ಛಾ ರಸ್ತೆ ಇದೆಯಾದರೂ ಈ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆಂಬುದು ಗ್ರಾಮಸ್ಥರಾದ ಪ್ರಭಾಕರ್, ಜಯಂತ್ ಅವರ ಅಳಲಾಗಿದೆ.

ಇನ್ನು ಸಂಸೆ ಗ್ರಾಮದಿಂದ ಗುಳ್ಯಾ ಗ್ರಾಮ ತಲುಪಲು ಕಚ್ಚಾ ರಸ್ತೆಯಲ್ಲಿ ವಾಹನಗಳ ಹರಸಾಹಸ ಪಟ್ಟು ಸಾಗಬೇಕಿದೆ. ವಾಹನಗಳು ಈ ರಸ್ತೆಯಲ್ಲಿ ಪ್ರತಿದಿನ ಸರ್ಕಸ್ ಮಾಡುತ್ತಾ ಸಂಚರಿಸುತ್ತಿವೆಯಾದರೂ ಗುಳ್ಯಾ ಗ್ರಾಮದ ಸಮೀಪದಲ್ಲಿ ಹರಿಯುವ ನದಿ ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವುದರಿಂದ ವಾಹನಗಳು ಗ್ರಾಮ ತಲುಪಲು ಸಾಧ್ಯವಿಲ್ಲ. ಹೊಳೆಯವರೆಗೂ ವಾಹನಗಳು ಸಂಚರಿಸಿ ಹಿಂದಿರುಗಬೇಕಾದ ಪರಿಸ್ಥಿತಿ ಇಲ್ಲಿದ್ದು, ಗ್ರಾಮದ ನಿವಾಸಿಗಳು ಹೊಳೆಯಲ್ಲಿ ಇಳಿದು ನಡೆದು ಗ್ರಾಮ ತಲುಪಬೇಕಿದೆ ಎಂದು ನಿವಾಸಿಗಳಾದ ಪಾರ್ವತಿ, ರಾಘವೇಂದ್ರ, ಮಂಜುಳಾ ಹೇಳುತ್ತಾರೆ.

ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ನಿವಾಸಿಗಳು ಹಾಗೂ ಶಾಲಾ ಕಾಲೇಜು ಮಕ್ಕಳು ನದಿ ದಾಟಿ ಬರಬಹುದು. ಆದರೆ ಮಳೆಗಾಲದಲ್ಲಿ ಭಾರೀ ಮಳೆಗೆ ನದಿ ಅಪಾಯದ ಮಟ್ಟದಲ್ಲಿ ಹರಿಯುವುದರಿಂದ ನದಿ ದಾಟಲು ಸಾಧ್ಯವಿಲ್ಲ. ನದಿ ದಾಟಲು ಸೇತುವೆ ಇಲ್ಲದಿರುವುದರಿಂದ ಮಳೆಗಾಲದ ಆರು ತಿಂಗಳು ಇಲ್ಲಿನ ನಿವಾಸಿಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುವುದು ಅನಿವಾರ್ಯ ಎಂಬಂತಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳೂ ಮಳೆಗಾಲದ ಆರು ತಿಂಗಳು ಶಾಲಾ ಕಾಲೇಜಿನತ್ತ ಮುಖ ಮಾಡದಂತಹ ಸಂದಿಗ್ಧ ಪರಿಸ್ಥಿತಿ ಈ ಗ್ರಾಮದ ನಿವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಕಾಲೇಜು ವಿದ್ಯಾರ್ಥಿನಿ ಚೈತ್ರಾ, ಪ್ರದೀಪ್ ದೂರಿದ್ದಾರೆ. 

ಈ ಕಾರಣಕ್ಕೆ ಇಲ್ಲಿನ ನಿವಾಸಿಗಳು ಗ್ರಾಮದ ಸಮೀಪದಲ್ಲಿ ಹರಿಯುವ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಕೊಡಿ ಎಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಗ್ರಾಮಸ್ಥರ ಸೇತುವೆ ಕನಸಿಗೆ ಇದುವರೆಗೂ ನನಸಾಗಿಲ್ಲ. ಈ ಹಿಂದೆ ಗ್ರಾಮಕ್ಕೆ ನಕ್ಸಲರ ತಂಡವೊಂದು ಭೇಟಿ ನೀಡಿದ್ದರೆಂಬ ಶಂಕೆ ಮೇಲೆ ಪೊಲೀಸರು ಈ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ನಿವಾಸಿಗಳ ಸಮಸ್ಯೆಯನ್ನು ಪಟ್ಟಿ ಮಾಡಿಕೊಂಡು ಜಿಲ್ಲಾಡಳಿತಕ್ಕೆ ವರದಿ ಮಾಡಿದ್ದರು. ಈ ವೇಳೆ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸುವ ಭರವಸೆ ಜಿಲ್ಲಾಡಳಿತದಿಂದ ಸಿಕ್ಕಿತ್ತಾದರೂ ಭರವಸೆ ಮಾತ್ರ ಈಡೇರಲಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ. 

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೂಲ ಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತಿರುವುದಾಗಿ ಗ್ರಾಮದ ನಿವಾಸಿಗಳು ಗುರುವಾರ ಮೂಡಿಗೆರೆ ತಹಶೀಲ್ದಾರ್, ಜಿಪಂ ಸಿಇಒ, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಚುನಾವನಾ ಬಹಿಷ್ಕಾರದ ಬ್ಯಾನರ್‍ಗಳನ್ನು ಗ್ರಾಮದ ಸಮೀಪದ ರಸ್ತೆಯಲ್ಲಿ ನೇತು ಹಾಕಿದ್ದಾರೆ. ನಿವಾಸಿಗಳ ಮನವೊಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಗುಳ್ಯ ಗ್ರಾಮದ ಸಮಸ್ಯೆಗಳನ್ನು ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಪತ್ರ ಬರೆದು ಸೌಲಭ್ಯಕ್ಕಾಗಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಮುಖ್ಯವಾಗಿ ಸುಸಜ್ಜಿತ ರಸ್ತೆ ಹಾಗೂ ಗ್ರಾಮಕ್ಕೆ ಹೊಂದಿಕೊಂಡಂತಿರುವ ನದಿಗೆ ಸೇತುವೆ ನಿರ್ಮಾಣ ಕೆಲಸ ತುರ್ತಾಗಿ ಆಗಬೇಕಿದೆ. ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.
- ವಾಸುದೇವ್, ಗುಳ್ಯಾ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News