ಮಂಡ್ಯದಲ್ಲಿ ಜೆಡಿಎಸ್ ಮಣಿಸಲು ಕಾಂಗ್ರೆಸ್, ಬಿಜೆಪಿ, ರೈತಸಂಘದಿಂದ ಸಂಚು: ಸಿಎಂ ಕುಮಾರಸ್ವಾಮಿ

Update: 2019-04-05 13:41 GMT

ಚಿಕ್ಕಮಗಳೂರು, ಎ.5: ಮಂಡ್ಯದಲ್ಲಿ ಹೆಸರಿಗೆ ಮಾತ್ರ ಪಕ್ಷೇತರ ಅಭ್ಯರ್ಥಿಯಷ್ಟೇ. ಕಾಂಗ್ರೆಸ್, ಬಿಜೆಪಿ, ರೈತಸಂಘ ಹಾಗೂ ಟಿವಿ ಮಾಧ್ಯಮಗಳೂ ಪಕ್ಷೇತರ ಅಭ್ಯರ್ಥಿಯ ಬೆಂಬಲಕ್ಕಿಳಿದಿವೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದರು.

ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮಣಿಸಲು ಮಾಧ್ಯಮಗಳೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಸಂಚು ನಡೆಸಿವೆ. ಎಲ್ಲ ರೀತಿಯ ಚಕ್ರವ್ಯೂಹ ರಚಿಸಿದ್ದಾರೆ. ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿಲ್ಲ, ರಾಜ್ಯದೆಲ್ಲೆಡೆ ಚುನಾವಣೆ ನಡೆಯುತ್ತಿದೆ. ಟಿವಿಯವರು ಮಂಡ್ಯವನ್ನೇ ತೋರಿಸುತ್ತಿದ್ದಾರೆ. ಟಿವಿಗಳಲ್ಲಿ ತೋರಿಸುತ್ತಿರುವ ಮಂಡ್ಯದ ಚಿತ್ರಣ ಬೇರೆ, ಅಲ್ಲಿರುವ ವಾಸ್ತವ ಪರಿಸ್ಥಿತಿಯೇ ಬೇರೆ. ಮೇ.23ರ ಬಳಿಕ ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸುತ್ತೇನೆ ಎಂದರು.

ಇತ್ತೀಚೆಗೆ ಐಟಿ ರೈಡ್ ನಡೆದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಐಟಿ ಇಲಾಖೆ ಯಾರ ಕೈಯಲ್ಲಿವೆ ಎಂಬುದು ಎಲ್ಲರಿಗೂ ಗೊತ್ತು. ಐಟಿ ದಾಳಿ ನಡೆದಿರುವುದು ಬಿಜೆಪಿಯವರ ಮಾರ್ಗದರ್ಶನದಲ್ಲಿ. ಇದಕ್ಕೆ ಸೊಪ್ಪು ಹಾಕದೇ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಸಿ.ಟಿ.ರವಿ ಶಾಸಕ ಆದಾಗ ಆತನ ಬಳಿ ಏನಿತ್ತು? ಶಾಸಕ ಆದಾಗ ನನ್ನ ಬಳಿ ಬಂದು ಏನು ತೆಗೆದುಕೊಂಡು ಹೋದರೆಂದು ಅವರನ್ನೇ ಕೇಳಿ ನೋಡಿ, ನಿಮ್ಮದು ಗೋಲ್ಡನ್ ಹ್ಯಾಂಡ್ ಎಂದು ಹೇಳಿ ರವಿ ನನ್ನ ಬಳಿ ಬಂಡವಾಳ ಪಡೆದು ಹೋಗಿದ್ದಾರೆ. ನಿಮ್ಮಿಂದಲೇ ಉದ್ದಾರ ಆದೆ ಎಂದೂ ಹೇಳಿದ್ದಾರೆ. ದೇವೇಗೌಡ ಅವರು ಕೃಷಿ ಬಿಟ್ಟು ಬೇರೆ ವ್ಯವಹಾರ ಮಾಡದೇ ಇರಬಹುದು. ಆದರೆ ನಾನು ಚಿತ್ರ ನಿರ್ಮಾಪಕ, ಹಂಚಿಕೆದಾರ, ನಮ್ಮದೇ ಸ್ವಂತ ವ್ಯವಹಾರಗಳಿವೆ. ರಾಜಕೀಯ ನಮ್ಮ ವೃತ್ತಿಯಾಗಿದೆ. ಆದರೆ ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಶಾಸಕ ಆದ ಮೇಲೆ ಕಲ್ಲು ಹೊಡೆಯುವುದು, ಸರಕಾರಿ ಆಸ್ತಿ ಲೂಟಿ ಮಾಡೋದನ್ನು ನಾನೆಂದೂ ಮಾಡಿಲ್ಲ
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News