ಮೈಸೂರು: ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮೋದಿ ಪರ ಘೋಷಣೆ

Update: 2019-04-05 15:44 GMT

ಮೈಸೂರು,ಎ.5: ಮೈಸೂರು ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಕಾರ್ಯಕರ್ತರು ಪ್ರಧಾನಿ ಮೋದಿಗೆ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಗುತ್ತಿತ್ತು. ಈ ಜೆಡಿಎಸ್ ಸಭೆಯಲ್ಲಿ ಭಾರೀ ಗಲಾಟೆ ನಡೆದಿದ್ದು, ಗೊಂದಲ ಗೂಡಾದ ಸಭೆಯಲ್ಲಿ ಮೈತ್ರಿಯಲ್ಲಿನ ಭಾರೀ ಅಸಮಾಧಾನ ಬಹಿರಂಗವಾಗಿದೆ.

ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಬೆಂಬಲಿಸುವ ವಿಚಾರ ಕುರಿತು ಇಂದು ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಸಚಿವ ಜಿ.ಟಿ ದೇವೇಗೌಡರ ಎದುರೇ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದು, ವಿಜಯ್ ಶಂಕರ್ ಬೆಂಬಲಿಸಲು ನಿರಾಕರಿಸಿದ್ದಾರೆ. ಈ ವೇಳೆ ಸಚಿವ ಜಿ.ಟಿ ದೇವೇಗೌಡೆರ ಮಾತಿಗೂ ಬೆಲೆ ಕೊಡದ ಕೆಲ ಕಾರ್ಯಕರ್ತರು ಪ್ರಧಾನಿ ಮೋದಿಗೆ ಜೈಕಾರ ಹಾಕಿದ್ದಾರೆ ಎನ್ನಲಾಗಿದೆ.

ಸಚಿವ ಜಿ.ಟಿ ದೇವೇಗೌಡರ ಎದುರೇ ತಳ್ಳಾಟ ನೂಕಾಟ ನಡೆದಿದ್ದು ಉದ್ವಿಗ್ನ ವಾತಾವರಣವೂ ಉಂಟಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಜಿಟಿ ದೇವೇಗೌಡರನ್ನ ಭೇಟಿಯಾಗಿ ವಿಜಯ್ ಶಂಕರ್ ಅವರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಸಚಿವ ಜಿ.ಟಿ ದೇವೇಗೌಡ ವೈರತ್ವ ಮರೆತು ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಕುರಿತು ಜೆಡಿಎಸ್ ಕಾರ್ಯಕರ್ತರ ಜತೆ ಚರ್ಚೆ ನಡೆಸಲು ಸಭೆ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News