ಧರ್ಮದ ಹೆಸರಿನಲ್ಲಿ ಆಳ್ವಿಕೆ ನಡೆಸುವ ಬಿಜೆಪಿಯನ್ನು ತಿರಸ್ಕರಿಸಿ: ಸತೀಶ್ ಜಾರಕಿಹೊಳಿ

Update: 2019-04-05 16:28 GMT

ಸುರಪುರ, ಎ.5: ದೇಶವನ್ನು ಧರ್ಮದ ಹೆಸರಲ್ಲಿ ಆಳುವ ಬಿಜೆಪಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ಅಭಿವೃದ್ಧಿ ಹೆಸರಲ್ಲಿ ಆಳಲು ಇಚ್ಛಿಸುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಪರವಾಗಿ ಸುರಪುರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರತಿ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಹಾಕುವೆ ಎಂದು ಸುಳ್ಳು ಹೇಳಿದ್ದಾರೆ. ಅದೇ ಮಾದರಿಯಲ್ಲಿಯೆ ಪ್ರತಿ ಯೋಜನೆಯ ಕುರಿತು ಕೇವಲ ಸುಳ್ಳಿನ ಕಂತೆಯನ್ನಷ್ಟೆ ಕಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಅಂಧ ಭಕ್ತರ ಸಂಖ್ಯೆ ಹೆಚ್ಚಾಗಿದೆ ಅದರಂತೆ ಸುರಪುರದಲ್ಲಿಯೂ ಅಂಧ ಭಕ್ತರಿದ್ದು, ಅವರ ಯಾವುದೇ ಮಾತುಗಳಿಗೆ ಮರುಳಾಗಬಾರದು. ಈ ದೇಶವನ್ನು ಜವಹಾರಲಾಲ್ ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಅಂತಹ ನಾಯಕರುಗಳಿಂದ ದೇಶದ ಅಭಿವೃದ್ಧಿ ಹೊಂದಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕರನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಮಾಜಿ ಶಾಸಕ ರಾಜವೆಂಕಟಪ್ಪನಾಯಕ್ ಮಾತನಾಡಿ, ಸುರಪುರ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 10,000 ಕ್ಕಿಂತಲೂ ಹೆಚ್ಚಿನ ಮತಗಳ ಲೀಡ್ ಸಿಗಲಿದೆ. ಅಲ್ಲದೆ, ಯಾರು ಕೂಡ ಸ್ವತಂತ್ರ ಅಭ್ಯರ್ಥಿಗಳಿಗೆ ಮತ ನೀಡದೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕರಿಗೆ ಮತ ಹಾಕುವ ಮೂಲಕ ಪ್ರತಿಯೊಬ್ಬರು ಅಭಿವೃದ್ಧಿಯತ್ತ ಸಾಗಲು ನಿರ್ಧರಿಸಬೇಕಿದೆ ಎಂದು ತಿಳಿಸಿದರು.

ಅಭ್ಯರ್ಥಿ ಬಿ.ವಿ.ನಾಯಕ ಮಾತನಾಡಿ, ಬಿಜೆಪಿ ಸರಕಾರ ದೇಶದ ಅಭಿವೃದ್ಧಿ ಮಾಡದೆ ಕೇವಲ 5 ವರ್ಷದಲ್ಲಿ ಎಲ್ಲವನ್ನೂ ಮಾಡಿರುವೆ ಎಂದು ಭಾಷಣಕ್ಕೆ ಮಾತ್ರ ಸೀಮಿತರಾಗಿದ್ದಾರೆ. ರೈತರನ್ನು ಶೋಷಿತರನ್ನು ಬಡವರನ್ನು ಮರೆತು ಕೇವಲ ಅಂಬಾನಿ ಅದಾನಿ ನೀರವ್ ಮೋದಿಯಂತ ಬಂಡವಾಳಶಾಹಿಗಳ ಪರವಾಗಿರುವಂಥವರನ್ನು ಸೋಲಿಸಲು ತಾವೆಲ್ಲರೂ ಕಾಂಗ್ರೆಸ್‌ಗೆ ಮತ ನೀಡುವಂತೆ ವಿನಂತಿಸಿದರು.

ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಬಿ.ವಿ.ನಾಯಕರು ಒಬ್ಬ ಜನಪರ ಕಾಳಜಿಯುಳ್ಳ ಅಭ್ಯರ್ಥಿಯಾಗಿದ್ದು, ಎಲ್ಲರೂ ಅವರಿಗೆ ಮತ ನೀಡಿ ಆರಿಸಿ ತರುವಂತೆ ಕರೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರಗೌಡ, ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲ ದೇವಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News