ಬಾಂಗ್ಲಾದೇಶದ 24 ಅಕ್ರಮ ವಲಸಿಗರ ಹಸ್ತಾಂತರ

Update: 2019-04-05 16:42 GMT

ವಿಜಯಪುರ, ಎ.5: ಬಾಂಗ್ಲಾದಿಂದ ಅಕ್ರಮವಾಗಿ ದೇಶದೊಳಗೆ ನುಸುಳಿ, ವಿಜಯಪುರದಲ್ಲಿ ಸೆರೆ ಸಿಕ್ಕಿದ್ದ 24 ಬಾಂಗ್ಲಾ ನಿವಾಸಿಗಳನ್ನು ಶುಕ್ರವಾರ ಪೆಟ್ರಾಪೋಲ್ ಗಡಿಯಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಹಸ್ತಾಂತರಿಸಿದರು.

ಬಾಂಗ್ಲಾ ರಾಯಭಾರಿ ಕಚೇರಿ ಸಲ್ಲಿಸಿದ ಅಧಿಕೃತ ದಾಖಲೆಗಳ ಜತೆ, ಅಕ್ರಮ ನುಸುಳಿಗರನ್ನು ಬಿಎಸ್‌ಎಫ್‌ಗೆ ಮೊದಲು ಹಸ್ತಾಂತರಿಸಿದ ಪೊಲೀಸರು, ನಂತರ ಬಾಂಗ್ಲಾ ದೇಶದ ಅಧಿಕಾರಿಗಳು ಹಸ್ತಾಂತರ ಪ್ರಕ್ರಿಯೆಯಲ್ಲೂ ಪಾಲ್ಗೊಂಡಿದ್ದರು ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ತಿಳಿಸಿದ್ದಾರೆ. ವಿಜಯಪುರ ದರ್ಗಾ ಜೈಲಿನಿಂದ ಗುರುವಾರ ಮೂವರು ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಇವರನ್ನು ಹೈದರಾಬಾದ್ ಮಾರ್ಗವಾಗಿ ವಿಮಾನದಲ್ಲಿ ಕೋಲ್ಕತ್ತಾಗೆ ಕರೆದೊಯ್ದಿತ್ತು. ಅಲ್ಲಿಂದ ಪೆಟ್ರಾಪೋಲ್ ಗಡಿಯಲ್ಲಿ ದಾಖಲೆಗಳ ಜೊತೆ ಹಸ್ತಾಂತರ ನಡೆಸಿದೆ ಎಂದು ಅವರು ಹೇಳಿದರು. 

ವಿಜಯಪುರದಲ್ಲಿ 2017ರಲ್ಲಿ 33 ಮಂದಿ ಅಕ್ರಮ ವಲಿಸಿಗರನ್ನು ಬಂಧಿಸಿ ದೂರು ದಾಖಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ, ನ್ಯಾಯಾಲಯಕ್ಕೂ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಎರಡೂ ಕಡೆ ಪ್ರಕ್ರಿಯೆ ನಡೆದಿತ್ತು. 2018ರ ಜೂನ್‌ನಲ್ಲಿ 18 ವರ್ಷದೊಳಗಿನ ಒಂಬತ್ತು ಮಕ್ಕಳನ್ನು ಬಾಂಗ್ಲಾಗೆ ಮರಳಿ ಕಳುಹಿಸಲಾಗಿತ್ತು. ಡಿಸೆಂಬರ್‌ನಲ್ಲಿ ಬಾಂಗ್ಲಾ ರಾಯಭಾರಿ ಕಚೇರಿ ಅಧಿಕಾರಿಗಳು ಅಕ್ರಮ ವಲಸಿಗರಿಗೆ ಸಂಬಂಧಿಸಿದ ದಾಖಲಾತಿ ಸಲ್ಲಿಸಿದ್ದರು. ಇದರ ನಡುವೆ ನ್ಯಾಯಾಲಯ ಈ ಆರೋಪಿತರಿಗೆ ಎರಡು ವರ್ಷ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದೂವರೆಗೂ ಜೈಲಿನಲ್ಲಿದ್ದ ಅವಧಿಯನ್ನೇ ಶಿಕ್ಷಾ ಅವಧಿ ಎಂದು ಪರಿಗಣಿಸಿ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾ ದೇಶದ ರಾಯಭಾರಿ ಕಚೇರಿಯೂ ಸೂಕ್ತ ದಾಖಲೆ ಸಲ್ಲಿಸಿದೆ ಎಂದು ನಿಕ್ಕಂ ಪ್ರಕರಣದ ವಿವರ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News