ಪ್ರಪ್ರಥಮ ಬಾರಿಗೆ ಶೌಚಗುಂಡಿ ಸ್ವಚ್ಛತಾ ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ

Update: 2019-04-05 17:30 GMT

ಹೊಸದಿಲ್ಲಿ, ಎ.5: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿ ಆಂದೋಲನ್(ಎಸ್‌ಕೆಎ) ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಮಲಗುಂಡಿ, ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ದತಿಯನ್ನು ತೊಲಗಿಸುವುದೂ ಸೇರಿದಂತೆ ಹಲವು ಬೇಡಿಕೆಗಳಿವೆ.

ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ದತಿಯನ್ನು ನಿವಾರಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಎಸ್‌ಕೆಎಯ ರಾಷ್ಟ್ರೀಯ ಸಂಚಾಲಕ ಬೆಜುವಾಡ ವಿಲ್ಸನ್ ಹೊಸದಿಲ್ಲಿಯಲ್ಲಿರುವ ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಜಾತಿ, ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿದು, ಘನತೆಯಿಂದ ಬದುಕುವ ತಮ್ಮ ಮೂಲಭೂತ ಹಕ್ಕನ್ನು ಮರುಪಡೆಯುವ ನಿಟ್ಟಿನಲ್ಲಿ ಚರಂಡಿ ಸ್ವಚ್ಛತೆ ಕೆಲಸಗಾರರ ನಿರ್ದಿಷ್ಟ ಬೇಡಿಕೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

 ನಮ್ಮ ಇತಿಹಾಸದಲ್ಲೇ ಇದೊಂದು ಮಹಾನ್ ಕ್ಷಣವಾಗಿದೆ. ಇದೇ ಮೊದಲ ಬಾರಿಗೆ ಕೈಯಿಂದ ಸ್ವಚ್ಛಗೊಳಿಸುವವರು ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ನಮ್ಮ ಹಿತದ ಬಗ್ಗೆ ಗಮನ ನೀಡದ ಸರಕಾರ ನಮಗೆ ಅಗತ್ಯವಿಲ್ಲ. ಇಲ್ಲಿ ನಮ್ಮ ಬೇಡಿಕೆಗಳನ್ನು ಇರಿಸಿದ್ದೇವೆ. ಇವನ್ನು ಈಡೇರಿಸುವಂತೆ ಅಧಿಕಾರದಲ್ಲಿರುವ ಜನರಲ್ಲಿ ಮನವಿ ಮಾಡುವುದಿಲ್ಲ, ಆದೇಶಿಸುತ್ತಿದ್ದೇವೆ ಎಂದು ವಿಲ್ಸನ್ ಹೇಳಿದ್ದಾರೆ.

ಮನುವಾದಿ, ಅವೈಜ್ಞಾನಿಕ, ವಿಚಾರಹೀನ ಮತ್ತು ಮೂಲಭೂತವಾದಿ ಶಕ್ತಿಗಳು ಜನರ ಅಜೆಂಡಾವನ್ನು ಹೈಜಾಕ್ ಮಾಡಿರುವುದು ತೀವ್ರ ಆತಂಕದ ವಿಷಯವಾಗಿದೆ. ಅಸ್ಪ್ರುಶ್ಯತೆ, ಹಸಿವು, ಬಡತನ, ಲಿಂಗ ಹಿಂಸೆ ಹಾಗೂ ನಿರುದ್ಯೋಗದ ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಸಂವಾದದಿಂದ ಹೊರಗಿಡಲಾಗಿದೆ. ಈ ಪ್ರವೃತ್ತಿ ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಗಂಭೀರ ಬೆದರಿಕೆ ಒಡ್ಡಿದೆ ಎಂದವರು ಹೇಳಿದ್ದಾರೆ.

ನಮ್ಮ ದುರವಸ್ಥೆಯನ್ನು ಕಂಡರೂ ಕೇಂದ್ರ, ರಾಜ್ಯ ಸರಕಾರಗಳು , ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ. ಕೇವಲ ನಮ್ಮ ಜಾತಿಯಿಂದಾಗಿ ಕೈಯಿಂದ ಸ್ವಚ್ಛಗೊಳಿಸಲು ನಮ್ಮನ್ನು ಎಲ್ಲಿಯವರೆಗೆ ಬಲವಂತಪಡಿಸಲಾಗುವುದೋ ಅದುವರೆಗೆ ಈ ದೇಶವನ್ನು ಪ್ರಜಾಪ್ರಭುತ್ವ ಎಂದು ಪರಿಗಣಿಸಲಾಗದು ಎಂದು ಎಸ್‌ಕೆಎಯ ಮತ್ತೋರ್ವ ರಾಷ್ಟ್ರೀಯ ಸಂಚಾಲಕಿ ದೀಪ್ತಿ ಸುಕುಮಾರ್ ಹೇಳಿದ್ದಾರೆ.

ಈ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯ ಪಟ್ಟಿಯಿದೆ. ಇದನ್ನು ಎಲ್ಲಾ ರಾಜಕೀಯ ಪಕ್ಷಗಳಿಗೂ ಕಳುಹಿಸಿಕೊಡಲಾಗುವುದು. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪುವುದಾದರೆ ಮಾತ್ರ ಅವರು ಅಧಿಕಾರಕ್ಕೆ ಬರಬಹುದು ಎಂದವರು ಹೇಳಿದ್ದಾರೆ.

ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಭಾರತೀಯ ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಉಚಿತ ಶಿಕ್ಷಣ, ಆರೋಗ್ಯ ಸುರಕ್ಷೆ, ಘನತೆಯ ಉದ್ಯೋಗ ಮತ್ತು ಜೀವನೋಪಾಯ ಹಾಗೂ ಇತರ ಸೌಲಭ್ಯಗಳನ್ನು ಖಾತರಿಗೊಳಿಸುವ ಆರ್‌ಎಲ್-21 ಕಾರ್ಡ್( ರೈಟ್ ಟು ಲೈಫ್-21) ನೀಡಬೇಕು. ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರ ಕ್ಷೇಮಾಭ್ಯುದಯಕ್ಕಾಗಿ ಕೇಂದ್ರದ ಬಜೆಟ್‌ನಲ್ಲಿ ಶೇ.1ರಷ್ಟು ನಿಧಿಯನ್ನು ಮೀಸಲಿರಿಸಬೇಕು, ಹಾಗೂ ಇಂತಹ ಕಾರ್ಮಿಕರ ಪುನರ್ವಸತಿ ಕಾರ್ಯಕ್ಕಾಗಿ ಪ್ರಧಾನಿ ನೇತೃತ್ವದ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಬೇಕು, 55 ವರ್ಷ ಮೀರಿದ ಸ್ವಚ್ಛತಾ ಕಾರ್ಮಿಕರಿಗೆ ಮಾಸಿಕ 6 ಸಾವಿರ ರೂ. ಪಿಂಚಣಿ ಮತ್ತಿತರ ಬೇಡಿಕೆಯನ್ನು ಪ್ರಣಾಳಿಕೆ ಒಳಗೊಂಡಿದೆ.

ಅಧಿಕಾರದಲ್ಲಿ ಉಳಿಯಬೇಕಿದ್ದರೆ ನಮ್ಮ ಕ್ಷೇಮಾಭ್ಯುದಯದ ಹಾಗೂ ಬೇಡಿಕೆಯ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ರಾಜಕೀಯ ಪಕ್ಷಗಳು ತಿಳಿದುಕೊಳ್ಳಬೇಕು ಎಂದು ಎಸ್‌ಕೆಎ ಆಡಳಿತ ಮಂಡಳಿ ಸದಸ್ಯೆ ಉಷಾ ರಾಮನಾಥನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News