ಮೋದಿ ಭ್ರಮೆಗೆ ಯುವಜನತೆ ಬಲಿಯಾಗದಂತೆ ತಡೆಯಬೇಕಿದೆ: ಹೆಚ್.ಡಿ.ದೇವೇಗೌಡ

Update: 2019-04-07 18:52 GMT

ತುಮಕೂರು,ಎ.07: ಪ್ರಧಾನಿ ಮೋದಿಯವರ ಬಗ್ಗೆ ಮಾಧ್ಯಮಗಳು ಸೃಷ್ಟಿಸಿರುವ ಭ್ರಮೆಯಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಯುವಕರು ತೇಲಿ ಹೊಗದಂತೆ ತಡೆಯುವ ಗುರುತರ ಜವಾಬ್ದಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲಿದೆ ಎಂದು ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ರಾಷ್ಟ್ರಮಟ್ಟದಲ್ಲಿ ಒಂದೆರಡು ಇಂಗ್ಲಿಷ್ ಮತ್ತು ಹಿಂದಿ ಚಾನಲ್‍ಗಳನ್ನು ಹೊರತು ಪಡಿಸಿದರೆ ಉಳಿದ ಬಹುತೇಕ ದೃಶ್ಯ ಮಾಧ್ಯಮಗಳು ಮೋದಿಯನ್ನು ಬಿಟ್ಟರೆ ಈ ದೇಶದಲ್ಲಿ ಅಧಿಕಾರ ನಡೆಸಲು ಬೇರೆಯವರು ಯೋಗ್ಯರಲ್ಲ ಎಂಬಂತೆ ಬಿಂಬಿಸುತ್ತಿವೆ. ಇದರ ಸತ್ಯಾಸತ್ಯತೆ ತಿಳಿಯದೆ ಯುವ ಜನತೆ ಸಹ ಮಾಧ್ಯಮಗಳ ತಾಳಕ್ಕೆ ತಕ್ಕಂತೆ ಕುಣಿಯುತಿದ್ದಾರೆ. ಇದರ ಹಿಂದಿರುವ ಅಪಾಯವನ್ನು ತಿಳಿಸುವ ಜೊತೆಗೆ, ಯುವಜನರು ಮತ್ತೊಂದು ಬಾರಿ ಮೋಸ ಹೋಗದಂತೆ ಮಾಡಬೇಕಿದೆ ಎಂದು ದೇವೇಗೌಡರು ನುಡಿದರು.

ಕಾಂಗ್ರೆಸ್-ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ದೇಶದ ಹಿತದೃಷ್ಟಿಯಿಂದ ತಮ್ಮಲ್ಲಿನ ವೈಮನಸ್ಸನ್ನು ಬದಿಗಿರಿಸಿ, ಒಗ್ಗೂಡಿ ಕೆಲಸ ಮಾಡಿದರೆ, ಬಿಜೆಪಿ ರಾಜ್ಯದಲ್ಲಿ ಎರಡಂಕಿ ದಾಟದಂತೆ ತಡೆಯುಬಹುದಾಗಿದೆ. ಕಳೆದ 10 ತಿಂಗಳ ಮೈತ್ರಿ ಸರಕಾರದ ಆಡಳಿತದಲ್ಲಿ ಈ ಹಿಂದಿನ ಸಿದ್ದರಾಮಯ್ಯ ಸರಕಾರ ನೀಡಿದ್ದ ಕಾರ್ಯಕ್ರಮಗಳನ್ನು ಮುಂದುವರೆಸುವುದರ ಜೊತೆಗೆ, ಬಡವರು, ದೀನ ದಲಿತರು, ಅಲ್ಪಸಂಖ್ಯಾತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಮೈತ್ರಿ ಸರಕಾರದ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಎಂದು ಮಾಜಿ ಪ್ರಧಾನಿ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇಶದಲ್ಲಿ ಶೇ.18ರಷ್ಟು ಮುಸ್ಲಿಂರಿದ್ದಾರೆ. ಇವರೆಲ್ಲರೂ ಭಾರತದಲ್ಲಿಯೇ ಹುಟ್ಟಿ ಭಾರತದಲ್ಲಿಯೇ ಸಾಯುತ್ತಾರೆ. ಆದರೆ ದೇಶದಲ್ಲಿ ಸ್ವಾತಂತ್ರ ಪೂರ್ವದ ದೇಶ ವಿಭಜನೆಯ ಸಮಯದಲ್ಲಿ ಇದ್ದ ಪರಿಸ್ಥಿತಿ ಮತ್ತೊಮ್ಮೆ ಕಂಡು ಬರುತ್ತಿದೆ. ಗೋವುಗಳನ್ನು ಸಾಗಿಸಿದರೂ, ಮೀಸೆ ಬಿಟ್ಟರೆ, ಚಪ್ಪಲಿ ಹಾಕಿದರೆಂಬ ಕಾರಣಕ್ಕೆ ದಲಿತರು, ಅಲ್ಪಸಂಖ್ಯಾತರನ್ನು ಬೀದಿ ಹೆಣಗಳಾಗಿಸುತ್ತಿದ್ದರೂ 56 ಇಂಚಿನ ಎದೆಯ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ. ಸಂವಿಧಾನದ ಆಶಯದಂತೆ ಈ ವರ್ಗಗಳಿಗೆ ರಕ್ಷಣೆ ನೀಡಬೇಕಾದ ಗುರುತರ ಜವಾಬ್ದಾರಿ ಎರಡು ಪಕ್ಷಗಳ ಮೇಲಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಯಾವ ಕಾರ್ಯಕ್ರಮವನ್ನು ಮೋದಿ ನೀಡಿಲ್ಲ, ಕೋಮುವಾದ ಪ್ರಚೋದನೆ ಮಾಡುವ ಮೂಲಕ ಜನರು ಶಾಂತಿಯಿಂದ ಬದುಕದಂತಹ ವಾತಾವರಣ ನಿರ್ಮಿಸಲು ಹೊರಟಿದೆ. ದೇಶದಲ್ಲಿ ಅತ್ಯಂತ ಸುಳ್ಳುಗಾರ ಮೋದಿ,ಹತ್ತುಕೋಟಿ ಉದ್ಯೋಗ ಕೊಡಲಿಲ್ಲ , ರೈತರು ಆತ್ಮಹತ್ಯೆ ಮಾಡಿಕೊಂಡರು ಪರಿಹಾರ ಕೊಡದೇ ಚುನಾವಣಾ ಗಿಮಿಕ್ ಗಾಗಿ ಭಿಕ್ಷೆ ಹಾಕಲು ಮುಂದಾಗಿದ್ದಾರೆ. ನೋಟು ಅಮಾನ್ಯೀಕರಣದಿಂದ ದೇಶದ ಅಭಿವೃದ್ಧಿ ಹಿಂದಕ್ಕೆ ಹೋಗಿದೆ. ಹೀಗಿದ್ದೂ ಮತ್ತೊಮ್ಮೆ ಅವಕಾಶ ಕೊಡಿ ಎಂದು ಕೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕುಟುಕಿದರು.

ಇಂದಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಕಾಂಗ್ರೆಸ್ ನಿಂದ ಮೂರು ಬಾರಿ ಸಂಸದರಾಗಿ ದೆಹಲಿಗೆ ಹೋಗಿ ಮಲಗಿದ್ದು ಬಿಟ್ಟರೆ ಬೇರೆನು ಮಾಡಲಿಲ್ಲ. ಅವರು ಜಿಲ್ಲೆಗೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ತುಮಕೂರು ವಿವಿ, ಎತ್ತಿನಹೊಳೆ ಯೋಜನೆ, ಕ್ಯಾನ್ಸರ್ ಆಸ್ಪತ್ರೆಯಂತಹ ಮಹತ್ವದ ಯೋಜನೆಗಳ ಹಿಂದೆ ನನ್ನ ಶ್ರಮವಿದೆ. ಅಲ್ಪಸಂಖ್ಯಾತ ಮತದಾರರಲ್ಲಿ ನನ್ನ ಕೋರಿಕೆ ಇಷ್ಟೇ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಿದರು.

ಆಹಾರ ಮತ್ತು ವಕ್ಪ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಗೊತ್ತಿದೆ. ನಿರಂತರವಾಗಿ ಮುಸ್ಲಿಂರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಮುಸ್ಲಿಮರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಅವರಿಗೆ ಟಿಕೇಟ್ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಮುಸ್ಲಿಮರು ಸ್ವಾಭಿಮಾನಿಗಳು, ಯಾರ ಮನೆ ಬಾಗಿಲಿಗೆ ಹೋಗಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಅಧ್ಯಕ್ಷ ಹ್ಯಾರಿಸ್ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ರಫೀಕ್ ಅಹಮದ್, ಎಸ್.ಷಪಿ ಅಹಮದ್, ವಿಧಾನಪರಿಷತ್ ಸದಸ್ಯರಾದ ವೇಣುಗೋಪಾಲ, ಬೆಮಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರಾದ ಷಡಕ್ಷರಿ, ಜಯಚಂದ್ರ, ಮುಖಂಡರಾದ ಗೋವಿಂದರಾಜು, ಆರ್.ರಾಮಕೃಷ್ಣ, ಹೆಚ್.ನಿಂಗಪ್ಪ, ಝಪ್ರವುಲ್ಲಾ ಖಾನ್, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು ಮತ್ತಿತರರು ವೇದಿಕೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News