ಅವಮಾನಕರ ಹೇಳಿಕೆ: ಈಶ್ವರಪ್ಪ ಮುಸ್ಲಿಮರ ಕ್ಷಮೆ ಯಾಚನೆಗೆ ಬಿಜೆಪಿ ಅಲ್ಪಸಂಖ್ಯಾತ ಘಟಕ ಒತ್ತಾಯ

Update: 2019-04-08 05:00 GMT

ವಿಜಯಪುರ, ಎ.8: ಮುಸ್ಲಿಮರು ಬಿಜೆಪಿಗೆ ಮತ ನೀಡಿಲ್ಲ ಎಂಬ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಆಧಾರ ರಹಿತ, ವಿವೇಚನಾರಹಿತವಾಗಿದೆ. ಅದರಲ್ಲೂ ಮುಸ್ಲಿಮರು ಟಿಕೇಟ್ ಪಡೆದುಕೊಳ್ಳಲು ಬಿಜೆಪಿ ಕಾರ್ಯಾಲಯಕ್ಕೆ ಬಂದು ಕಸ ಗುಡಿಸಿ ಎಂದು ಹೇಳಿಕೆ ನೀಡಿರುವುದು ಸಮಸ್ತ ಅಲ್ಪಸಂಖ್ಯಾತರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಈಶ್ವರಪ್ಪ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ವಿಜಯಪುರ ಜಿಲ್ಲಾಧ್ಯಕ್ಷ ಯಾಸೀನ್ ಜವಳಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಅಲ್ಪಸಂಖ್ಯಾತ ವರ್ಗದ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುಸ್ಲಿಮರ ಮತ ಗಳಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅನೇಕ ಸಮೀಕ್ಷೆಗಳು ಧೃಡಪಡಿಸಿವೆ. ಪರಿಸ್ಥಿತಿ ಹೀಗಿರುವಾಗ ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಮರ ಬಗ್ಗೆ ಕೀಳಾಗಿ ಮಾತನಾಡಿರುವುದು ಕೆ.ಎಸ್.ಈಶ್ವರಪ್ಪ ಅವರಿಗೆ ಶೋಭೆ ತರದು. ಕೂಡಲೇ ಅವರು ಸಮಸ್ತ ಮುಸ್ಲಿಂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News