ಅಸಮಾಧಾನ ಶಮನಕ್ಕೆ ಯತ್ನ: ಅಡ್ವಾಣಿ, ಜೋಷಿಯನ್ನು ಭೇಟಿಯಾಗಲಿರುವ ಅಮಿತ್ ಶಾ

Update: 2019-04-08 08:30 GMT

ಹೊಸದಿಲ್ಲಿ, ಎ.8: ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಅಸಮಾಧಾನ ಹೊಂದಿರುವ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಇಂದು ಭೇಟಿಯಾಗುವ ನಿರೀಕ್ಷೆಯಿದೆ. ತಮ್ಮ ‘ಗುರು’ಗಳನ್ನು ಕಡೆಗಣಿಸಿದ್ದಾರೆಂದು ವಿಪಕ್ಷಗಳಿಂದ ಪ್ರಧಾನಿ ಮೋದಿ ಹಾಗೂ ಶಾ ಟೀಕೆಗೊಳಗಾಗಿರುವ ಹಿನ್ನೆಲೆಯಲ್ಲಿ ಶಾ ಈ ಇಬ್ಬರು ನಾಯಕರನ್ನು ಭೇಟಿಯಾಗಲಿದ್ದಾರೆಂದು ಹೇಳಲಾಗಿದೆ.

ತೊಂಬತ್ತೊಂದು ವರ್ಷದ ಅಡ್ವಾಣಿ ಕಳೆದ ಆರು ಅವಧಿಗಳಿಂದ ಪ್ರತಿನಿಧಿಸುತ್ತಿರುವ ಗುಜರಾತ್ ನ ಗಾಂಧಿನಗರ ಕ್ಷೇತ್ರದಿಂದ ಈ ಬಾರಿ ಅಮಿತ್ ಶಾ ಸ್ಪರ್ಧಿಸುತ್ತಿದ್ದರೆ, ಜೋಷಿ ಕಳೆದ ವಾರ ತಮ್ಮ ಕಾನ್ಪುರ್ ಮತದಾರರಿಗೆ ಬರೆದ ಬಹಿರಂಗ ಪತ್ರದಲ್ಲಿ ಕಾನ್ಪುರದಿಂದ ಸ್ಪರ್ಧಿಸದಂತೆ ಪಕ್ಷ ತಮಗೆ ಸೂಚನೆ ನೀಡಿದೆ ಎಂದು ತಿಳಿಸಿದ್ದರು.

ಆದರೆ ಹಲವು ದಿನಗಳ ಕಾಲ ಮೌನದಿಂದಿದ್ದ ಅಡ್ವಾಣಿ ಕಳೆದ ವಾರ ತಾವು ಬರೆದ ಬ್ಲಾಗ್ ನಲ್ಲಿ ಬಿಜೆಪಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದರಲ್ಲದೆ ಪಕ್ಷ ಯಾವತ್ತೂ ತನ್ನ ಟೀಕಾಕಾರರನ್ನು ‘ದೇಶವಿರೋಧಿ’ಗಳೆಂದು ಪರಿಗಣಿಸಿರಲಿಲ್ಲ ಎಂದು ಹೇಳಿದ್ದರು.

ವಿಪಕ್ಷಗಳು ಅಡ್ವಾಣಿ ಹಾಗೂ ಜೋಷಿ ಅವರನ್ನು ಭೇಟಿಯಾಗಿ ಮೋದಿ ವಿರುದ್ಧ ವಾರಣಾಸಿಯಿಂದ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಫರ್ ಮಾಡಿವೆ ಎಂಬ ವರದಿಗಳು ಬಿಜೆಪಿಯನ್ನು ಮತ್ತಷ್ಟು ಚಿಂತೆಗೀಡು ಮಾಡಿವೆ. ಈ ಹಿಂದೆ ವಾರಣಾಸಿಯನ್ನು ಪ್ರತಿನಿಧಿಸಿದ್ದ ಜೋಷಿ ಕಳೆದ ಬಾರಿ ತಮ್ಮ ಕ್ಷೇತ್ರವನ್ನು ಮೋದಿಗೆ ಬಿಟ್ಟುಕೊಟ್ಟು ತಾವು ಕಾನ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News