ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮ ಪಿತಾಮಹನ ಅಂತಿಮ ನರಳಾಟ!

Update: 2019-04-09 06:39 GMT

ಮಹಾಭಾರತದ ಭೀಷ್ಮ ಪಿತಾಮಹ ಕುರುಕ್ಷೇತ್ರದಲ್ಲಿ ಕೌರವನ ಸೇನಾಧಿಪತಿಯಾಗಿ ಯುದ್ಧ ಮಾಡಿ ಯುದ್ಧವೆಲ್ಲ ಮುಗಿದು, ಶರಶಯ್ಯೆಯಲ್ಲಿ ಉತ್ತರಾಯಣಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ‘‘ಹೇಗೆ ರಾಜ್ಯವಾಳಬೇಕು?’’ ಎನ್ನುವುದನ್ನು ಪಾಂಡವರಿಗೆ ಬೋಧಿಸಿದಂತಿದೆ ಇತ್ತೀಚೆಗೆ ಅಡ್ವಾಣಿಯವರು ಬ್ಲಾಗೊಂದು ಬರೆದು ರಾಜಕಾರಣಿಗಳಿಗೆ ನೀಡಿದ ಹಿತವಚನ. ಆ ಹಿತವಚನವನ್ನು ಭೀಷ್ಮ ಮೊದಲೇ ದುರ್ಯೋಧನನಿಗೆ ಬೋಧಿಸಿದ್ದಿದ್ದರೆ ಶರಶಯ್ಯೆಯಲ್ಲಿ ಮಲಗುವ ಸ್ಥಿತಿಯೇ ಬರುತ್ತಿರಲಿಲ್ಲ. ಒಂದು ವೇಳೆ ದುರ್ಯೋಧನ ತಪ್ಪು ದಾರಿಯಲ್ಲಿದ್ದಾನೆ, ತನ್ನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಭೀಷ್ಮರಿಗೆ ಅನ್ನಿಸಿದ್ದಿದ್ದರೆ ಅವರು ಯುದ್ಧದಲ್ಲಿ ಆತನ ಸೇನಾಧಿಪತಿಯಾಗುವ ಅಗತ್ಯವಾದರೂ ಏನಿತ್ತು? ಯುದ್ಧದಿಂದ ದೂರ ನಿಲ್ಲುವ ಅವಕಾಶ ಅವರಿಗಿತ್ತಲ್ಲ? ಉಪ್ಪಿನ ಋಣದ ನೆಪದಲ್ಲಿ, ಒಂದು ಅನ್ಯಾಯದ ಯುದ್ಧವೊಂದರ ನೇತೃತ್ವವನ್ನು ವಹಿಸಿ, ತನ್ನ ಪ್ರಭುವಿಗಾಗಿ ಸಾವಿರಾರು ಅಮಾಯಕರನ್ನು ಕೊಂದು, ಶರಶಯ್ಯೆಯಲ್ಲಿ ಮಲಗಿ ಸಾವನ್ನು ಎದುರು ನೋಡುತ್ತಾ ಇರುವ ಭೀಷ್ಮ, ಪಾಂಡವರಿಗೆ ರಾಜಧರ್ಮವನ್ನು ಬೋಧಿಸುವುದೇ ಮಹಾಭಾರತದ ದೊಡ್ಡ ವ್ಯಂಗ್ಯವಾಗಿದೆ. ಬಿಜೆಪಿಯೊಳಗಿನ ಭೀಷ್ಮ ಎಂದೇ ಗುರುತಿಸಲ್ಪಡುತ್ತಿರುವ ಅಡ್ವಾಣಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತಾವೇ ಸೃಷ್ಟಿಸಿದ ಭಸ್ಮಾಸುರನಿಗೆ ನೀತಿ ಪಾಠ ಹೇಳಲು ಹೊರಟಿದ್ದಾರೆ. ಆದರೆ ಅಡ್ವಾಣಿಯ ಈ ಅಂತಿಮ ಚೀತ್ಕಾರವನ್ನು ಕೇಳುವ ಸ್ಥಿತಿಯಲ್ಲಿ ಬಿಜೆಪಿಯೊಳಗೆ ಯಾರೂ ಇಲ್ಲ.

‘‘ವೈವಿಧ್ಯವನ್ನು ಗೌರವಿಸುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ ಇವು ಭಾರತದ ಪ್ರಜಾಪ್ರಭುತ್ವದ ಸಾರವಾಗಿದೆ. ರಾಜಕೀಯವಾಗಿ ತನ್ನೊಂದಿಗೆ ಸಹಮತ ಹೊಂದಿಲ್ಲದವರನ್ನು ಶತ್ರುಗಳೆಂದು ಪಕ್ಷ ಎಂದಿಗೂ ಪರಿಗಣಿಸಿಲ್ಲ. ಪಕ್ಷದೊಳಗೆ ಪ್ರಜಾಪ್ರಭುತ್ವ ಹಾಗೂ ಪ್ರಜಾತಾಂತ್ರಿಕ ವೌಲ್ಯಗಳ ಬಗ್ಗೆ ಅವಲೋಕನ ನಡೆಸಬೇಕು’’ ಎನ್ನುವ ಕರೆಯನ್ನು ಯಾರಿಗಾಗಿ ನೀಡಿದ್ದಾರೆ, ಯಾಕಾಗಿ ನೀಡಿದ್ದಾರೆ ಎನ್ನುವುದನ್ನು ದೇಶ ಈಗಾಗಲೇ ಅರ್ಥ ಮಾಡಿಕೊಂಡಿದೆ. ಸಭೆಯಲ್ಲಿ ದ್ರೌಪದಿಯ ಸೀರೆ ಎಳೆಯುತ್ತಿದ್ದಾಗಲೂ ತುಟಿ ಪಿಟಿಕ್ ಎನ್ನದೆ ‘ಧರ್ಮ ಸೂಕ್ಷ್ಮ’ದ ಕುರಿತಂತೆ ಮಾತನಾಡಿ ಪರೋಕ್ಷವಾಗಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಮರ್ಥಿಸಿದ ಭೀಷ್ಮರಿಗೆ ಅಡ್ವಾಣಿ ಚೆನ್ನಾಗಿಯೇ ಹೋಲುತ್ತಾರೆ. ಗುಜರಾತ್ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಅಡ್ವಾಣಿಯವರು ನರೇಂದ್ರ ಮೋದಿಯವರನ್ನು ರಕ್ಷಿಸಿದರು. ಗುಜರಾತ್ ಹತ್ಯಾಕಾಂಡದ ಹೊಣೆ ಹೊತ್ತು ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕೆಂದು ಅಟಲ್ ಬಿಹಾರಿ ವಾಜಪೇಯಿ ಒತ್ತಡ ಹೇರಿದಾಗ ಅದನ್ನು ತಡೆದವರು ಎಲ್.ಕೆ. ಅಡ್ವಾಣಿಯವರೇ ಆಗಿದ್ದಾರೆ. ವಾಜಪೇಯಿ ತಾವೇ ಖುದ್ದಾಗಿ ರಾಜೀನಾಮೆ ನೀಡಲು ಮುಂದಾದಾಗಲೂ ಅವರನ್ನು ಮನವೊಲಿಸಿದ್ದು ಇದೇ ಅಡ್ವಾಣಿ. ದೇಶದ ವೈವಿಧ್ಯವನ್ನು ಅಳಿಸುವುದೇ ರಾಷ್ಟ್ರ ಕಟ್ಟುವ ಮಾರ್ಗ ಎಂದು ಬಲವಾಗಿ ನಂಬಿಕೊಂಡಿರುವ ನರೇಂದ್ರ ಮೋದಿಗೆ ‘ವೈವಿಧ್ಯವನ್ನು ಗೌರವಿಸಿ’ ಎಂದು ಸಲಹೆ ನೀಡಲು ಮುಂದಾಗಿರುವುದು ಅಡ್ವಾಣಿಯವರ ಹತಾಶೆ ಮತ್ತು ಅಸಹಾಯಕತೆಯ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ರಥಯಾತ್ರೆಯ ಚಕ್ರದಡಿಗೆ ಸಿಲುಕಿ ಈ ದೇಶದ ಸಹಸ್ರಾರು ಅಮಾಯಕರು ಜೀವತೊರೆದಾಗ, ಅಡ್ವಾಣಿಯವರ ಪ್ರೀತಿಯ ಶಿಷ್ಯರಾಗಿದ್ದ ಮೋದಿ ಭಂಟನಂತೆ ಅವರ ಪಕ್ಕದಲ್ಲೇ ನಿಂತಿದ್ದರು. ಅಡ್ವಾಣಿಯವರ ಎಲ್ಲ ರಾಜಕೀಯ ವಿದ್ವತ್ತು ಅಧಿಕಾರ ಹಿಡಿಯುವಲ್ಲಿ ವಿಫಲವಾದಾಗ ಅವರು ಆರಿಸಿಕೊಂಡದ್ದು ರಥಯಾತ್ರೆ ಹೆಸರಲ್ಲಿ ಹಿಂಸೆಯ ರಾಜಕಾರಣ ಮತ್ತು ಅದರಲ್ಲಿ ಅವರು ಯಶಸ್ವಿಯಾದರು ಕೂಡ. ಹಿಂಸಾಚಾರದ ಮೂಲಕ ಅಧಿಕಾರ ಹಿಡಿಯಬಹುದು ಎನ್ನುವುದನ್ನು ನರೇಂದ್ರ ಮೋದಿಯವರು ಕಲಿತದ್ದೇ ಅಡ್ವಾಣಿಯವರ ಮೂಲಕ. ಮುಸ್ಲಿಮರೂ ಈ ದೇಶದ ವೈವಿಧ್ಯದ ಭಾಗವೆನ್ನುವುದನ್ನು ಮರೆತು, ಅವರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದವರು ಈ ಭೀಷ್ಮ ಪಿತಾಮಹರೇ ಆಗಿದ್ದಾರೆ. ಬಹುಶಃ ರಥಯಾತ್ರೆಯ ಹಿಂಸಾಚಾರದ ಎರಡನೆಯ ಭಾಗ ಗುಜರಾತ್ ಹತ್ಯಾಕಾಂಡವಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ ದೇಶದ ಸಾಂಸ್ಕೃತಿಕ ಘನತೆಗೆ ಮತ್ತು ನೈತಿಕ ವರ್ಚಸ್ಸಿಗೆ ದೊಡ್ಡ ಕಳಂಕವನ್ನು ತಂದಿತು. ಗುಜರಾತ್ ಹತ್ಯಾಕಾಂಡದ ಬಳಿಕ ವಿಶ್ವವು ಭಾರತವನ್ನು ನೋಡುವ ದೃಷ್ಟಿ ಬದಲಾಯಿತು. ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಈ ದೇಶದ ವೈವಿಧ್ಯ, ಸೌಹಾರ್ದದ ಕುರಿತಂತೆ ಮಾತನಾಡುತ್ತಿದ್ದಾಗ ಅವರ ಬಾಯಿ ಮುಚ್ಚಿಸಿದವರು ಇದೇ ಎಲ್.ಕೆ.ಅಡ್ವಾಣಿ. ಹೇಗೆ ಹಿಂಸಾ ರಾಜಕಾರಣದ ಮೂಲಕ ಅಡ್ವಾಣಿ ಗುರುತಿಸಿಕೊಂಡರೋ, ಅದೇ ದಾರಿಯಲ್ಲಿ ಮೋದಿಯೂ ಗುರುತಿಸಿಕೊಳ್ಳಲು ಮುಂದಾದರು ಮತ್ತು ಅದರಲ್ಲಿ ಯಶಸ್ವಿಯಾದರು.

ಅಡ್ವಾಣಿ ಕಾಲದಲ್ಲಿ ಮುಸ್ಲಿಮರನ್ನು ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿತ್ತು. ಈಗ ನರೇಂದ್ರ ಮೋದಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬಿಜೆಪಿಯನ್ನು ಎಂದು ಹೇಳುವುದಕ್ಕಿಂತ ‘ತನ್ನನ್ನು’ ವಿರೋಧಿಸುವ ಹಿಂದೂ, ಮುಸ್ಲಿಮ್, ಕ್ರೈಸ್ತರೆಲ್ಲರೂ ದೇಶದ್ರೋಹಿಗಳು ಎಂದು ಬಿಂಬಿಸಲು ಹೊರಟಿದ್ದಾರೆ. ವಿಪರ್ಯಾಸವೆಂದರೆ, ಸದ್ಯಕ್ಕೆ ಆ ದೇಶದ್ರೋಹಿಗಳ ಪಟ್ಟಿಯಲ್ಲಿ ಸ್ವತಃ ಅಡ್ವಾಣಿ ಮತ್ತು ಅವರ ತಲೆಮಾರಿನ ಬಿಜೆಪಿ ಮುಖಂಡರ ಹೆಸರುಗಳೂ ಸೇರಿಕೊಂಡಿವೆ. ಪ್ರಧಾನಿ ಮೋದಿಯವರ ಆಡಳಿತ ‘ಸರ್ವಾಧಿಕಾರದ ಕಡೆಗೆ’ ಸಾಗುತ್ತಿರುವುದನ್ನು ಮೊತ್ತ ಮೊದಲು ಗುರುತಿಸಿದವರೇ ಅಡ್ವಾಣಿಯವರು. ಇಂದಿರಾಗಾಂಧಿಯ ತುರ್ತುಪರಿಸ್ಥಿತಿ ದಿನಗಳನ್ನು ನೆನೆಯುತ್ತಾ ‘‘ಮತ್ತೆ ಈ ದೇಶ ತುರ್ತು ಪರಿಸ್ಥ್ಝಿತಿಯನ್ನು ಎದುರಿಸುವ ಸ್ಥಿತಿ ಬಂದರೆ ಅದರಲ್ಲಿ ಅಚ್ಚರಿಯಿಲ್ಲ’’ ಎಂದು ಹೇಳಿದ್ದರು. ಆದರೆ ಇಂತಹ ಹೇಳಿಕೆಯನ್ನು ನೀಡಿದ ಬಳಿಕ ಅಡ್ವಾಣಿಯವರು ಬಿಜೆಪಿಯೊಳಗೆ ಸಂಪೂರ್ಣ ಮೂಲೆಗೊತ್ತಲ್ಪಟ್ಟರು. ಅಂದು ಮುಚ್ಚಿದ ಬಾಯಿ ತೆರೆದದ್ದು ಇದೀಗ, ರಾಜಕೀಯದಿಂದ ಅತ್ಯಂತ ಅವಮಾನಕರವಾಗಿ ನಿರ್ಗಮಿಸುತ್ತಿರುವ ಈ ಸಂದರ್ಭದಲ್ಲಿ. ಹಿಂಸೆಯ ಹುಲಿಯ ಮೇಲೆ ಸವಾರಿ ಮಾಡಿ ಅಧಿಕಾರ ಹಿಡಿದರೆ ಒಂದಲ್ಲ ಒಂದು ದಿನ ಆ ಹುಲಿಗೆ ಬಲಿಯಾಗಲೇ ಬೇಕಾಗುತ್ತದೆ. ಇಂದು ಅಡ್ವಾಣಿ ಏರಿದ ಹುಲಿ ಅವರನ್ನು ಮಾತ್ರವಲ್ಲ, ದೇಶವನ್ನೇ ಬಲಿತೆಗೆದುಕೊಳ್ಳಲು ಹೊರಟಿದೆ. ತನ್ನ ನಿವೃತ್ತ ಜೀವನದ ಈ ಹೊತ್ತಿನಲ್ಲಿ ತನ್ನ ಪ್ರಮಾದದ ಕುರಿತಂತೆ ಪಶ್ಚಾತ್ತಾಪ ಪಟ್ಟು, ಹಿಂಸಾರಾಜಕೀಯದ ವಿರುದ್ಧ ಸ್ಪಷ್ಟ ಪದಗಳಲ್ಲಿ ಮಾತನಾಡಬೇಕಾಗಿದೆ. ಪಕ್ಷಕ್ಕಿಂತ ದೇಶ ಮುಖ್ಯ ಎಂದು ಬ್ಲಾಗಿನಲ್ಲಿ ಬರೆದಿರುವ ಅಡ್ವಾಣಿಯವರು ಅದನ್ನು ಕಾರ್ಯಾಚರಣೆಗಿಳಿಸುವ ತುರ್ತು ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News