ಕ್ಷುಲ್ಲಕ ಕಾರಣಕ್ಕೆ ಜಗಳ : ಚೂರಿ ಇರಿತದಿಂದ ಓರ್ವನ ಕೊಲೆ, ಮತ್ತಿಬ್ಬರಿಗೆ ಗಾಯ

Update: 2019-04-08 18:41 GMT

ಶಿವಮೊಗ್ಗ, ಎ. 8: ವೈನ್‍ಶಾಪ್ ಬಳಿ ನಿಲ್ಲಿಸಿದ್ದ ಬೈಕ್‍ನ ಇಂಡಿಕೇಟರ್ ಲೈಟ್ ಹಾಳಾದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ಯುವಕರ ನಡುವೆ ನಡೆದ ಗಲಾಟೆಯ ವೇಳೆ ಚೂರಿ ಇರಿತದಿಂದ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭದ್ರಾವತಿ ಪಟ್ಟಣದಲ್ಲಿ ರವಿವಾರ ರಾತ್ರಿ ನಡೆದಿದೆ. 

ಬೊಮ್ಮನಕಟ್ಟೆ ಬಡಾವಣೆಯ ರಾಜೇಶ್ ವೈನ್ಸ್ ಬಳಿ ಈ ಘಟನೆ ನಡೆದಿದೆ. ಹಿರಿಯೂರು ಗ್ರಾಮದ ನಿವಾಸಿಯಾದ ರಮೇಶ್ (24) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ಸಂತೋಷ ಹಾಗೂ ಸುರೇಶ್ ಚೂರಿ ಇರಿತದಿಂದ ಗಾಯಗೊಂಡಿದ್ದಾರೆ. ಇವರಿಬ್ಬರಿಗೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿಗಳು ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಗಳಾದ ಮುಜಾಹೀದ್, ಫರೀದ್, ಮೌಲಾಲಿ ಯಾನೆ ಮೌಲಾ ಹಾಗೂ ಗೌಸ್ ಎಂದು ಗುರುತಿಸಲಾಗಿದೆ. ಇವರ ವಿರುದ್ದ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 307, 302 ಹಾಗೂ 34 ರ ಅಡಿ ಎಫ್‍ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಘಟನೆ ಹಿನ್ನೆಲೆ: ಕೊಲೆಗೀಡಾದ ರಮೇಶ್, ಆತನ ಸ್ನೇಹಿತರಾದ ಸಂತೋಷ ಹಾಗೂ ಸುರೇಶ್‍ರವರು ಬೈಕ್‍ನಲ್ಲಿ ಬೊಮ್ಮನಕಟ್ಟೆ ಬಡಾವಣೆಯ ರಾಜೇಶ್ ವೈನ್ ಶಾಪ್ ಬಳಿ ಆಗಮಿಸಿದ್ದಾರೆ. ಈ ವೇಳೆ ಆರೋಪಿಗಳು ಬೈಕ್ ಬೀಳಿಸಿದ್ದಾರೆ. ಈ ವೇಳೆ ಬೈಕ್‍ನ ಇಂಡಿಕೇಟರ್ ಹಾಳಾಗಿದೆ. 
ಈ ಕುರಿತಂತೆ ಸಂತೋಷ ಹಾಗೂ ಸುರೇಶ್ ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಕಡೆಯವರ ನಡುವೆ ಗಲಾಟೆ ನಡೆಯಲಾರಂಭಿಸಿದೆ. ಇದನ್ನು ಗಮನಿಸಿದ ರಮೇಶ್ ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಆರೋಪಿ ಮುಜಾಹಿದ್ ತನ್ನ ಬಳಿಯಿದ್ದ ಚಾಕುವಿನಿಂದ ರಮೇಶ್ ಎದೆಗೆ ಇರಿದಿದ್ದಾನೆ. ನಂತರ ಸಂತೋಷ ಹಾಗೂ ಸುರೇಶ್‍ನಿಗೂ ತಿವಿದಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News