ಮತ್ತೆ ವಿವಾದಕ್ಕೀಡಾದ ಆದಿತ್ಯನಾಥ್ ರ 'ಅಲಿ- ಬಜರಂಗ ಬಲಿ' ಹೇಳಿಕೆ

Update: 2019-04-10 03:41 GMT

ಲಕ್ನೋ, ಎ.10: ಮುಸ್ಲಿಂ ಲೀಗ್ ಸಂಘಟನೆಯನ್ನು ಹಸಿರು ವೈರಸ್ ಎಂದು ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಮತದಾರರ ಮುಂದೆ ಇರುವ ಸ್ಪರ್ಧೆ "ಅಲಿ- ಬಜರಂಗ ಬಲಿ" ನಡುವಿನದ್ದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿರೋಧಿ ಒಕ್ಕೂಟಕ್ಕೆ ಮತ ನೀಡುವಂತೆ ಮುಸ್ಲಿಮರಿಗೆ ಮನವಿ ಮಾಡಿದ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೀಗ ಹಿಂದೂಗಳಿಗೆ ಬಿಜೆಪಿಗೆ ಮತ ಹಾಕುವುದು ಬಿಟ್ಟರೆ ಬೇರೆ ಅವಕಾಶವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ದಲಿತ- ಮುಸ್ಲಿಂ ಏಕತೆ ಅಸಾಧ್ಯ ಎಂದು ಬರೇಲಿಯಲ್ಲಿ ಪ್ರತಿಪಾದಿಸಿದ ಅವರು, ಮುಸ್ಲಿಂ ಮತದಾರರಿಗೆ ಕರೆ ನೀಡುವ ಮೂಲಕ ಮಾಯಾವತಿ ದಲಿತ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆಪಾದಿಸಿದರು. "ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿಗೆ ಅಲಿ ಮೇಲೆ ವಿಶ್ವಾಸವಿದ್ದರೆ, ನಮಗೆ ಬಜರಂಗ ಬಲಿ ಮೇಲೆ ವಿಶ್ವಾಸವಿದೆ" ಎಂದು ಮೀರಠ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಘೋಷಿಸಿದರು.

ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರು ಶೇಕಡ 90ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದಲ್ಲಿ ಮಾತ್ರ ಪಕ್ಷ ಗೆಲ್ಲುತ್ತದೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಸಂದರ್ಭದಲ್ಲಿ ಆದಿತ್ಯನಾಥ್ ಮೊಟ್ಟಮೊದಲ ಬಾರಿಗೆ ಅಲಿ- ಬಜರಂಗ ಬಲಿ ನಡುವಿನ ಹೋರಾಟ ಎಂದು ಬಣ್ಣಿಸಿದ್ದರು.

''ದೇಶ ವಿಭಜನೆಗೆ ಕಾರಣವಾದ ಹಸಿರು ವೈರಸ್, ಕೇರಳದಲ್ಲಿ ಕಾಂಗ್ರೆಸ್ ಜತೆ ಸೇರಿದೆ. ಉತ್ತರ ಪ್ರದೇಶದಲ್ಲೂ ಎಸ್ಪಿ- ಬಿಎಸ್ಪಿ ಮೈತ್ರಿಕೂಟ ಬೆಂಬಲಿಸುವ ಮೂಲಕ ಇಲ್ಲೂ ಅದರ ಸೋಂಕು ತಗುಲಿದೆ. ಈ ಜನ ಹಸಿರು ವೈರಸ್ ಜತೆ ಸೇರಿ ದೇಶದ ವಿರುದ್ಧ ಪಿತೂರಿ ಮಾಡುತ್ತಾರೆ. ಅಖಿಲೇಶ್ ಹಾಗೂ ಮಾಯಾವತಿ ಇಬ್ಬರೂ ಮುಸ್ಲಿಂ ಕಾರ್ಡ್ ಆಡುತ್ತಿದ್ದರೆ, ಹಿಂದೂಗಳಿಗೆ ಬಿಜೆಪಿ ಹೊರತು ಯಾವುದೇ ಆಯ್ಕೆ ಇಲ್ಲ'' ಆದಿತ್ಯನಾಥ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News