ಹನೂರು: ಧ್ರುವನಾರಾಯಣ್ ಪರ ಎಂ.ಆರ್.ಸೀತಾರಾಮ್ ಪ್ರಚಾರ

Update: 2019-04-10 04:43 GMT

ಹನೂರು, ಎ.10: ಇಪ್ಪತ್ತು ವರ್ಷಗಳ ನಂತರ ಶ್ರೀನಿವಾಸ ಪ್ರಸಾದ್ ಅವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ನೆನಪಾಯ್ತೇ ಎಂದು ಮಾಜಿ ಸಚಿವ ಎಂ ಆರ್ ಸೀತಾರಾಮ್ ಟೀಕೆ ಮಾಡಿದ್ದಾರೆ. ಹನೂರು ತಾಲೂಕಿನ ಎಲ್ಲೆಮಾಳ ಮತ್ತು ಕುರಟ್ಟಿಹೂಸರು ಗ್ರಾಮಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸದ್ಯ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ ಪ್ರಸಾದ್ ಈ ಹಿಂದೆ ಇದೇ ಕ್ಷೇತ್ರದಲ್ಲಿ ಹಲವು ಭಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಸಂಸದರಾಗಿದ್ದವರು. ಈ ಕ್ಷೇತ್ರವನ್ನು ಬಿಟ್ಟ ನಂತರ ಹಲವು ಪಕ್ಷಗಳನ್ನು ಬದಲಾಯಿಸಿ ಈಗ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೇ ಎದುರಾಳಿಯಾಗಿದ್ದಾರೆ. ಆದರೆ ನಮ್ಮ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇವರ ಕೆಲಸ ವನ್ನು ಗುರುತಿಸಿ ಉತ್ತಮ ಸಂಸದೀಯ ಪಟು ಎಂದು ಸಹ ಸನ್ಮಾನಿಸಲಾಗಿದೆ. ಆದರೆ ಕಳೆದ 20 ವರ್ಷಗಳಲ್ಲಿ ಕ್ಷೇತ್ರವನ್ನು ಬಿಟ್ಟು ಹೋಗಿದ್ದ ಶ್ರೀನಿವಾಸ ಪ್ರಸಾದ್ ಅವರಿಗೆ ಚುನಾವಣೆ ಎದುರಾದಾಗ ನಮ್ಮೂರು ನೆನಪಾಯಿತೇ ಎಂದು ಟೀಕಿಸಿದರು.

ಎಲ್ಲಾ ವರ್ಗದ, ಜಾತಿ ಧರ್ಮದ, ಹಿಂದುಳಿದ ವರ್ಗಗಳ ಅಭಿವೃದ್ದಿ ಮಾಡಲು ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ಧ್ಯೇಯ ಹೊಂದಿರುವ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿ ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಾ, ಕೇವಲ ಪ್ರಚಾರ ಪಡೆದುಕೊಳ್ಳುತ್ತಿದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಹಲವಾರು ಕುತಂತ್ರಗಳನ್ನು ಮಾಡುತ್ತಿದ್ದು, ಪ್ರಜ್ಞಾವಂತ ಮತದಾರರು ಯೋಚನೆ ಮಾಡಿ ಮತದಾನ ಮಾಡಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ರಾಜ್ಯ ಬಣ್ಣ ಮತ್ತು ಅರಗು ನಿಗಮದ ಮಾಜಿ ಅಧ್ಯಕ್ಷ ವೆಂಕಟೇಶ್, ಜಿಪಂ ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ಗೋವಿಂದ, ಬಣಜಿಗ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಮಹದೇವ್, ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಜಯರಾಮ್, ಸದಸ್ಯ ಪ್ರಕಾಶ್, ಎಲ್ಲೆಮಾಳ ಮಾದೇಶ್, ಕುರಟ್ಟಿ ಹೊಸೂರಿನ ಗ್ರಾಪಂ ಅದ್ಯಕ್ಷ ಮುನಿ ಶೆಟ್ಟಿ, ಶೆಟ್ಟಳ್ಳಿ ಗ್ರಾಪಂ ಅಧ್ಯಕ್ಷ ಶಾಂತರಾಜು, ಬಣಜಿಗ ಜನಾಂಗದ ಮುಖಂಡರಾದ ಶಿವಣ್ಣ, ರವಿಚಂದ್ರ, ಬಸವರಾಜು, ಶ್ರೀರಂಗ ಶೆಟ್ಟಿ, ರಂಗಶೆಟ್ಟಿ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News