ಮಡಿಕೇರಿ:ಚುನಾವಣಾ ಅಕ್ರಮಗಳಿಗೆ ಕಡಿವಾಣ; ಸಿ-ವಿಜಿಲ್ ಆ್ಯಪ್ ಬಳಸಲು ಸಿಇಒ ಲಕ್ಷ್ಮಿಪ್ರಿಯಾ ಸಲಹೆ

Update: 2019-04-10 11:31 GMT

ಮಡಿಕೇರಿ,ಎ.10 :ಸಿ-ವಿಜಿಲ್ ಮೊಬೈಲ್ ಆ್ಯಪ್ ಸದ್ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕರಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಕೋರಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಸಾರ್ವಜನಿಕ ಸ್ನೇಹಿ ಆ್ಯಪ್ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.  

ಸಿ-ವಿಜಿಲ್ ಆ್ಯಪ್‍ನ ಮೂಲಕ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದರೆ ಅಂಥವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅಕ್ರಮಗಳಿಗೆ ಸಂಬಂಧಿತ ಛಾಯಾಚಿತ್ರ, ವೀಡಿಯೋ ಮತ್ತಿತರ ವಿವರಗಳನ್ನು ಆ್ಯಪ್ ಮೂಲಕ ಕಳುಹಿಸಿದ 15 ನಿಮಿಷದಲ್ಲಿ ಕ್ಷಿಪ್ರ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 100 ನಿಮಿಷಗಳ ಒಳಗೆ ಮಾಹಿತಿ ನೀಡಲಾಗುತ್ತದೆ ಎಂದರು. 

ಇನ್ನಷ್ಟು ಮಾಹಿತಿ: ಭಾರತ ಚುನಾವಣಾ ಆಯೋಗವು ಈ ಬಾರಿಯು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚ ಕುರಿತು ನಿಗಾವಹಿಸಲು ಸಿ-ವಿಜಿಲ್ ಎಂಬ ಮೊಬೈಲ್ ಆ್ಯಪ್‍ನ್ನು ಪರಿಚಯಿಸಿದೆ. ನಾಗರಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಿದ್ದಲ್ಲಿ ಸದರಿ ದೂರನ್ನು 100 ನಿಮಿಷದೊಳಗೆ ಇತ್ಯರ್ಥಗೊಳಿಸಲಾಗುವುದು. ಸಿ-ವಿಜಿಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಫೋಟೋ ಅಥವಾ ವಿಡಿಯೋ ಮೂಲಕ ದೂರನ್ನು ದಾಖಲಿಸಬಹುದು. ಸಿ-ವಿಜಿಲ್ ಆ್ಯಪ್ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಕಾರ್ಯಚರಣೆಯಲ್ಲಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡುವ ವ್ಯಕ್ತಿ, ಗುಂಪು, ಸ್ಥಳದ ಫೋಟೋ, ವೀಡಿಯೋಗಳನ್ನು ಈ ಆ್ಯಪ್‍ನಲ್ಲಿ ದಾಖಲಿಸಿ, ಜಿಲ್ಲಾ ಚುನಾವಣಾ ಘಟಕಕ್ಕೆ ನಾಗರಿಕರು ರವಾನಿಸಬಹುದು. 

ನಾಗರಿಕರು ಕಳುಹಿಸುವ ಈ ದೂರುಗಳು ಸಮೀಪದ ಜಿಲ್ಲಾ ಚುನಾವಣಾ ಆಯೋಗದ ಕಂಟ್ರೋಲ್ ರೂಂನಲ್ಲಿ ದಾಖಲಾಗುತ್ತದೆ. ಕಳುಹಿಸುವ ಫೋಟೋ ಅಥವಾ ವೀಡಿಯೋದಲ್ಲಿ ಚಿತ್ರೀಕರಿಸಿದ ಸ್ಥಳದ ಮಾಹಿತಿ ಜಿಪಿಆರ್‍ಎಸ್ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಯುತ್ತದೆ. ದೂರಿನ ಸ್ಥಳ ಮಾಹಿತಿಯನ್ನು ಆಧರಿಸಿ ಆ ಸ್ಥಳಕ್ಕೆ ಸಮೀಪವಿರುವ ನೀತಿ ಸಂಹಿತೆ ನಿಗಾ ತಂಡದ ಅಧಿಕಾರಿಗೆ ದೂರು ರವಾನೆಯಾಗುತ್ತದೆ. ದೂರು ಬಂದ 5 ನಿಮಿಷದ ಅವಧಿಯೊಳಗೆ ಜಿಲ್ಲಾ ಕಂಟ್ರೋಲ್ ರೂಂ ಅಧಿಕಾರಿಗಳ ತಂಡಕ್ಕೆ ದೂರು ವರ್ಗಾಯಿಸುತ್ತಾರೆ.

ದೂರು ಕೈಗೆತ್ತಿಕೊಂಡ ಅಧಿಕಾರಿಗಳ ತಂಡ 100 ನಿಮಿಷಗಳ ಕಾಲಾವಧಿಯೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತದೆ. ದೂರು ದಾಖಲಾದ 100 ನಿಮಿಷದೊಳಗೆ ದೂರುದಾರ ನಾಗರಿಕನಿಗೆ ದೂರಿನ ತನಿಖೆಯ ಮಾಹಿತಿಯ ಸ್ಥಿತಿ ಸಿ-ವಿಜಿಲ್ ಆ್ಯಪ್ ಮೂಲಕ ರವಾನೆಯಾಗುತ್ತದೆ.

ಈ ಎಲ್ಲಾ ಆನ್‍ಲೈನ್ ಬೆಳವಣಿಗೆಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ಕಣ್ಣಿಟ್ಟಿರುತ್ತದೆ. ಮತದಾರರನ್ನು ಸೆಳೆಯಲು ಹಣ, ಮದ್ಯ ಹಂಚುವುದು, ಉಡುಗೊರೆ ನೀಡುವುದು, ಧಾರ್ಮಿಕ ಸ್ಥಳ, ಸಮುದಾಯ ಭವನಗಳಲ್ಲಿ ಮತ ಯಾಚಿಸುವುದು, ಧ್ವನಿ ವರ್ಧಕಗಳನ್ನು ಅನುಮತಿ ಇಲ್ಲದ ಸಮಯದಲ್ಲಿ ಬಳಸುವುದು ಕಂಡುಬಂದಲ್ಲಿ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಪ್ರತಿಯೊಬ್ಬರೂ ಸಿ-ವಿಜಿಲ್ ಆ್ಯಪ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು.

ದೂರು ನೀಡುವ ನಾಗರಿಕರು ತಮ್ಮ ಮೊಬೈಲ್ ನಂ. ಮತ್ತು ಹೆಸರು ನೊಂದಾಯಿಸಬೇಕು ಅಥವಾ ಅನಾಮಧೇಯರಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ದೂರುದಾರರಿಗೆ ಮಾತ್ರ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಲಭಿಸಲಿದೆ. ಎಲ್ಲಾ ನಾಗರಿಕರು ಸಿ-ವಿಜಿಲ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News