ದೆಶದ ಸುಭದ್ರತೆಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು: ಯಡಿಯೂರಪ್ಪ

Update: 2019-04-11 18:30 GMT

ತರೀಕೆರೆ, ಎ.11: ಅರವತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಸರಕಾರ ದೇಶದ 125 ಕೋಟಿ ಜನರಿಗೆ ನೆಮ್ಮದಿಯಿಂದ ಬದುಕಲು ಯಾವುದೇ ಜನಪರ ಆಡಳಿತ ನಡೆಸುವಲ್ಲಿ ಮತ್ತು ದೇಶದ ಸುಭದ್ರತೆಗೆ ಮುಂದಾಗಲಿಲ್ಲ ಎಂದು  ಮಾಜಿ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪನವರು  ಹೇಳಿದರು.  

ತರೀಕೆರೆ ತಾಲ್ಲೂಕಿನ ಬುಕ್ಕಾಂಬೂದಿಯಲ್ಲಿ  ಸಾರ್ವಜನಿಕರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಕೈಗೊಂಡು ನಂತರ ಅಮೃತಾಪುರ ಹೋಬಳಿಯ ಹುಣಸಘಟ್ಟ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದ ಡಾ.ಮನ್‍ಮೋಹನ್ ಸಿಂಗ್ ಯಾವುದೇ ಜನಪರವಾದ ಯೋಜನೆಗಳನ್ನು ತಂದು ಭಾರತದ ಗ್ರಾಮೀಣ ಜನರು ಸ್ವಾವಲಂಭಿಗಳಾಗಿ ಬದುಕಲು ಆಸಕ್ತಿ ವಹಿಸಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸಿ ಅವರನ್ನು ಭಾರತದ ಪ್ರಜೆಗಳಾಗಿ ಮಾಡಬೇಕಾದ ಜವಾಬ್ದಾರಿ ನಿರ್ವಹಿಸದ ಅವರು, ಯು.ಪಿ.ಎ ಸರಕಾರದ ಅವಧಿಯಲ್ಲಿ ರಬ್ಬರ್  ಸ್ಟಾಂಪ್ ಪ್ರಧಾನಿಯಾಗಿ ಉಳಿದರು ಎಂದು ಟೀಕಿಸಿದ ಅವರು, ಇದು ದೇಶದ ಯುವಜನಾಂಗವನ್ನು ಕೆರಳಿಸಿದ್ದು, ದೇಶದ ಭವಿಷ್ಯದ ದೃಷ್ಟಿಯಿಂದ  ಭಾರತೀಯ ಜನತಾ ಪಾರ್ಟಿಯನ್ನು ಯುವಜನತೆ ಬೆಂಬಲಿಸುವಂತಾಯಿತು ಎಂದರು.

ರಾಷ್ಟದಲ್ಲಿ ಭಯೋತ್ಪಾದನಾ  ಚಟುವಟಿಕೆಯನ್ನು ದಮನ ಮಾಡುವ ಒಂದೇ ಒಂದು ಪ್ರಯತ್ನವನ್ನು ಯು.ಪಿ.ಎ ಸರಕಾರ ಮಾಡಲಿಲ್ಲ. ಬಡತನ ನಿರ್ಮೂಲನೆಗೆ ಮುಂದಾಗಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ 2014ರ ಮಹಾ ಚುನಾವಣೆಯಲ್ಲಿ ರಾಷ್ಟ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂತು. ನರೇಂದ್ರ ಮೋದಿಯವರು ಈ ದೇಶದ  ಪ್ರಧಾನಿಯಾಗಿ ವಿಶ್ವದಲ್ಲಿ  ಅಗ್ರಗಣ್ಯ ನಾಯಕರಾಗಿ ಬೆಳೆದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಿ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸಿ ಸಾಧನೆ ಮೆರೆದರು. ಮೋದಿಯವರು ಈ ದೇಶದ ಜನರು ಆರೋಗ್ಯವಂತರಾಗಿ ಇರಬೇಕು ಎಂದು ಭಾವಿಸಿ 3 ಕೋಟಿಗೂ ಅಧಿಕ ಶೌಚಾಲಾಯ ನಿರ್ಮಣ ಮಾಡಿದರು. ದೇಶದ 12.50 ಕೋಟಿ ರೈತರಿಗೆ ಪ್ರತೀ ವರ್ಷಕ್ಕೆ ಅವರ ಖಾತೆಗೆ 6000 ರೂ. ನೀಡುವುದರ ಮೂಲಕ ರೈತರನ್ನು ಪ್ರೋತ್ಸಾಹಿಸಿದ್ದಾರೆ. 50 ಕೋಟಿ ಜನರಿಗೆ  ಆಯುಷ್‍ಮಾನ್  ಸೌಲಭ್ಯಗಳನ್ನು ಒದಗಿಸಿದ್ದಾರೆ. ದೇಶದ  ಪ್ರತಿ ಹಳ್ಳಿ ಹಳ್ಳಿಗೂ  ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಾಗಿದ್ದಾರೆ.  ಗ್ರಾಮೀಣ ರಸ್ತೆಗಳನ್ನು ಮೇಲ್ದೆರ್ಜಿಗೆ ಎರಿಸಲು ಕ್ರಮ ಕೈಗೊಂಡಿರುತ್ತಾರೆ. ಸರಿ ಸುಮಾರು 60 ಸಾವಿರ ಕಿ.ಮೀ ರಸ್ತೆ ನಿರ್ಮಾಣಕ್ಕೆ ಮೋದಿ ಸರಕಾರ ಮುಂದಾಗಿದೆ ಎಂದರು.

ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ತರೀಕೆರೆ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನವನ್ನು ಅಮೃತಾಪುರ - ಉಭ್ರಾಣಿ ಏತ ನೀರಾವಾರಿಗೆ ಕೊಟ್ಟಿದ್ದೇನೆ. ರಾಜ್ಯದಲ್ಲಿ ಜನಪರವಾದ ಆಡಳಿತವನ್ನು ನಡೆಸುವುದರ ಮೂಲಕ ರಾಜ್ಯದಲ್ಲಿ ಜನತೆ ಸಮೃದ್ಧಿಯಿಂದ  ಬದುಕುವಂತೆ ಆಡಳಿತ ನೀಡಿದ್ದೇನೆ. ಇದೀಗ ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಲು ಶೋಭಾ ಕರಂದ್ಲಾಜೆಯನ್ನು ಇಲ್ಲಿಂದ  ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ದಿಲ್ಲಿಗೆ ಕಳಿಸಬೇಕೆಂದರು.

ಶಾಸಕ ಡಿ.ಎಸ್ ಸುರೇಶ್  ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆಯವರು ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತಂದು ಕೊಟ್ಟಿರುತ್ತಾರೆ. ತರೀಕೆರೆ ತಾಲೂಕನ್ನು ಹಾದು ಹೋಗುವ  ಕೆಲವು ರೈಲುಗಳನ್ನು ಅಜ್ಜಂಪುರ, ಶಿವನಿ ಮತ್ತು ತರೀಕೆರೆಯಲ್ಲಿ ನಿಲುಗಡೆಗೆ ಪ್ರಯತ್ನಿಸಿದ್ದಾರೆ.

ತರೀಕೆರೆ ಪಟ್ಟಣದಲ್ಲಿ  ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿಯವರಿಗೆ ಹಲವು ಸಹ ನಾವು ಸಹ ಸಂಸದೆಯೊಂದಿಗೆ  ದೆಹಲಿಗೆ ನಿಯೋಗ ಹೋಗಿ  ಮನವಿ ಸಲ್ಲಿಸಲಾಗಿದೆ.  ಉಭ್ರಾಣಿ ಎತ ನೀರಾವರಿಯ ನೀರು ಸಂಸ್ಕರಣ ಘಟಕಕ್ಕೆ ಅಧಿಕ ವಿದ್ಯುತ್ ಟ್ರಾನ್ಸ್‍ಫಾರಮರ್ ಒದಗಿಸಿದ್ದಾರೆ. ತಾಲೂಕಿನಾದ್ಯಾಂತ ಸಂಸದರ ನಿಧಿಯಿಂದ ಕೋಟ್ಯಾಂತರ ರೂ. ಅನುದಾನ ತಂದು  ರೈಲ್ವೆ  ಅಂಡರ್ ಪಾಸ್, ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಇನ್ನು ಮುಂತಾದ  ಅಭಿವೃದ್ಧಿ ಕಾರ್ಯಗಳ್ನು ಕೈಗೊಂಡಿರುತ್ತಾರೆ. ಶೋಭಾ ಕರಂದ್ಲಾಜೆಯವರನ್ನು ಅತ್ಯಧಿಕ ಮತಗಳ  ಗೆಲುವಿನಿಂದ ಸಂಸದರಾಗಿ ಆಯ್ಕೆಮಾಡಿ ಮತ್ತೊಮ್ಮೆ  ನರೇಂದ್ರ ಮೋದಿಯವರು ಈ ದೇಶದ  ಕೃಷ್ಣನಾಗಿ  ಕಲಿಯುಗದಲ್ಲಿ  ಅವತಾರ ತಾಳಿ ಕಂಸನಂತಿರುವ  ಪಾಕಿಸ್ತಾನವನ್ನು  ಬಗ್ಗು ಬಡಿಯುತ್ತಾರೆಂದರು. 

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಬಿ ಆನಂದಪ್ಪ, ವಿಧಾನ ಪರಿಷತ್ತು ಸದಸ್ಯ ಎಂ.ಕೆ. ಪ್ರಾಣೇಶ್, ಜಿ.ಪಂ ಉಪಾಧ್ಯಕ್ಷ ಕೆ.ಆರ್ ಆನಂದಪ್ಪ, ಚೈತ್ರಶ್ರೀ, ಮಂಜುಳಾ, ಸುಧಾಕರ್, ಡಿ.ಹಾಲಾನಾಯ್ಕ್, ರಮೇಶ್, ತಿಪ್ಪೇಶಪ್ಪ, ಹಾಗೂ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News