ಸ್ವತಂತ್ರ ವಿಚಾರ ಸರಣಿಗಳು, ಸ್ವತಂತ್ರ ಪ್ರವೃತ್ತಿಗಳಿಂದ ನಿರ್ಭಯ ನಾಗರಿಕರಾಗಿರಿ!

Update: 2019-04-11 18:32 GMT

ದಿಲ್ಲಿಯಲ್ಲಿ ದಿನಾಂಕ 10ನೆಯ ಜೂನ್ 1956ರಂದು ಅಂಬೇಡ್ಕರ್ ಭವನದ ಪಟಾಂಗಣದಲ್ಲಿ ಒಂದು ಸಭೆಯನ್ನು ಆಯೋಜಿಸಲಾಗಿತ್ತು.ಅದರಲ್ಲಿ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಜನರು ಹಾಜರಿದ್ದರು. ಆ ಸಭೆಯು 2500ನೆಯ ಬುದ್ಧನ ಪರಿನಿರ್ವಾಣ ಜಯಂತಿ ಮತ್ತು ಸಬೋಧವನ್ನು ಪಡೆದ ದಿನವಾಗಿ ಆಚರಿಸುವ ಉದ್ದೇಶದಿಂದ ಭಾರತೀಯ ಬೌದ್ಧಜನ ಸಮಿತಿ, ದಿಲ್ಲಿ ಶಾಖೆಯ ವತಿಯಿಂದ ಆಮಂತ್ರಣ ನೀಡಲಾಗಿತ್ತು. ಕಾಂಬೋಡಿಯಾದ ಆದರಣೀಯ ಧರ್ಮವೀರ ಮಹಾಥೇರಾ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಪ್ರಸಂಗದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಬಂಧುಗಳೆ ಮತ್ತು ಭಗಿನಿಯರೆ,
 ಬ್ರಾಹ್ಮಣ ಧರ್ಮವು ಅನ್ಯಾಯ, ನಿರ್ದಯತೆ ಮತ್ತು ಬಡವರ ಶೋಷಣೆ ಇಂಥವುಗಳಿಗೆಲ್ಲ ತವರು ಮನೆಯಾಗಿದೆ. ವರ್ಣವ್ಯವಸ್ಥೆಯಲ್ಲಿ ಎಲ್ಲರಿಗಿಂತಲೂ ಉಚ್ಚ ಸ್ಥಾನದಲ್ಲಿ ಬ್ರಾಹ್ಮಣರು ಇದ್ದು ಅವರ ಕೆಳಗೆ ಕ್ಷತ್ರಿಯರು ಬರುತ್ತಾರೆ. ಆನಂತರ ವೈಶ್ಯರು ಬಂದರೆ, ಕೊನೆಯಲ್ಲಿ ಎಲ್ಲರ ಭಾರವನ್ನು ತಲೆಯ ಮೇಲೆ ಹೊತ್ತುಕೊಂಡಿರುವಂತಹ ಶೂದ್ರ ವರ್ಗದವರು ಬರುತ್ತಾರೆ. ಒಂದೊಮ್ಮೆ ಶೂದ್ರನು ತನ್ನ ಉನ್ನತಿಯನ್ನು ಸಾಧಿಸಿಕೊಳ್ಳಬೇಕಾಗಿದ್ದರೆ, ಅವರು ಮೇಲಿನ ಮೂರೂ ವರ್ಣಗಳವರ ಜೊತೆಯಲ್ಲಿ ಸಂಘರ್ಷ ಮಾಡಬೇಕಾಗುತ್ತದೆ. ಈ ಮೂರೂ ವರ್ಣಗಳವರು ಸ್ವತಃ ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುವ ವಿಷಯವಾಗಿ ಸ್ವಲ್ಪವೂ ಯೋಚನೆಯನ್ನು ಮಾಡಬೇಕಾಗಿಲ್ಲ. ಕಾರಣ ಧರ್ಮಗ್ರಂಥಗಳು ಬ್ರಾಹ್ಮಣರಿಗೆ ವೈಶ್ಯ, ಕ್ಷತ್ರಿಯರಿಗಿಂತಲೂ ಶ್ರೇಷ್ಠತ್ವವನ್ನು ನೀಡಿರುವುದರಿಂದ ಅಕ್ಷರಶಃ ಬ್ರಾಹ್ಮಣ ವರ್ಗದವರ ಧಾರ್ಮಿಕ ಗುಲಾಮರಾಗಿದ್ದಾರೆ. ಸರಳ ಮಾತುಗಳಲ್ಲಿ ಹೇಳುವುದಾದರೆ, ಶೂದ್ರರ ಪ್ರಗತಿಗೆ ಅಡ್ಡ ಬರುವಂತಹ ಈ ಮೂರೂ ವರ್ಣಗಳವರು ಅವರಿಗೆ ಶತ್ರುಗಳೇ ಆಗಿದ್ದಾರೆ.
ಯಾವ ಸಮಾಜ ವ್ಯವಸ್ಥೆಯಲ್ಲಿ ಧಾರ್ಮಿಕ ಶೋಷಣೆಯು ನಡೆಯುತ್ತಿದೆಯೋ ಅಲ್ಲಿ ನೀವು ಪ್ರಗತಿಯ ಅಪೇಕ್ಷೆಯನ್ನು ಹೇಗೆ ವ್ಯಕ್ತಪಡಿಸುತ್ತೀರಿ? ಈ ಕಾರಣದಿಂದಾಗಿಯೇ ಶೂದ್ರರನ್ನು ನಿರಂತರವಾಗಿ ನಿರ್ಬಂಧದಲ್ಲಿಯೇ ಇರುವಂತೆ ಮಾಡಲಾಗಿತ್ತು. ಅಲ್ಲದೆ ಯಾವಾಗೆಲ್ಲಾ ಶೂದ್ರರು ಅದರ ವಿರುದ್ಧವಾಗಿ ಹೋರಾಟ ಮಾಡಲು ಟೊಂಕ ಕಟ್ಟಿ ನಿಲ್ಲುತ್ತಿದ್ದರೋ ಆಗ ಅವರ ರುಂಡಗಳನ್ನು ಎಗರಿಸಿ ಛಿದ್ರ ಛಿದ್ರ ಮಾಡಲಾಗುತ್ತಿತ್ತು.
ಈಗ ನೀವು ಬೌದ್ಧ ಧರ್ಮದ ಕಡೆಗೆ ನೋಡಿರಿ. ಇಲ್ಲಿ ಜಾತೀಯತೆಗೆ ಮತ್ತು ವಿಷಮತೆಗೆ ಯಾವುದೇ ಅವಕಾಶವೇ ಇಲ್ಲ. ಎಲ್ಲಾ ಅಧಿಕಾರಗಳು ಸಮಸಮವಾದುವು. ಎಲ್ಲರಿಗೂ ಧರ್ಮದಲ್ಲಿ ಗಂಭೀರ ಅಧಿಕಾರವಿರುತ್ತದೆ. ಯಾರೂ ಉಚ್ಚರಲ್ಲ; ಯಾರೂ ನೀಚರೂ ಅಲ್ಲ.
ಸ್ವತಃ ಬುದ್ಧನು ಅನ್ಯಾಯದ ವಿರುದ್ಧವಾಗಿ ಹೋರಾಟ ಮಾಡಿ ‘ಬಹುಜನ ಹಿತಾಯ, ಬಹುಜನ ಸುಖಾಯ’ಎಂಬ ನೆಲೆಯಿಂದ ಈ ಧರ್ಮವನ್ನು ಸ್ಥಾಪನೆ ಮಾಡಿದ್ದಾನೆ.
ಪೂರ್ವದಲ್ಲಿ ಆರ್ಯ (ಬ್ರಾಹ್ಮಣರು)ರು ತಮ್ಮ ಪೂಜಾವಿಧಿಗಳ ಆಚರಣೆ ಯಲ್ಲಿ ಸಾವಿರಾರು ಪಶುಗಳನ್ನು ಬಲಿ ಕೊಡುತ್ತಿದ್ದರು. ಪಶು ಹತ್ಯೆಯ ಇತಿಹಾಸ (ಹಸು ಮತ್ತು ಎಮ್ಮೆ)ವನ್ನು ನೋಡಿದರೆ ಬ್ರಿಟಿಷರು ಮತ್ತು ಮುಸಲ್ಮಾನರು ಈ ದೇಶದಲ್ಲಿ ಅಷ್ಟು ಪ್ರಮಾಣದಲ್ಲಿ ಕೊಂದು ತಿಂದಿಲ್ಲವೆಂದೇ ಹೇಳಬಹುದು. ಅಂದರೆ ಅದಕ್ಕಿಂತಲೂ ಹೆಚ್ಚಾಗಿ ಹಸುಗಳನ್ನು ಆಗಿನ ಬ್ರಾಹ್ಮಣರು ಕೊಂದು ತಿಂದು ಹಾಕಿದ್ದಾರೆ.
ಈ ಹಿಂದೆ ನಾಲ್ಕು ರೀತಿಯ ಬ್ರಾಹ್ಮಣರಿದ್ದರು. ಆದರೆ ಕಾಲಾಂತರದಲ್ಲಿ ಅವರು ಎಪ್ಪತ್ತು ಜಾತಿಯವರಾದರು. ಬ್ರಾಹ್ಮಣ ಧರ್ಮ ಗ್ರಂಥದಲ್ಲಿ ಕಂಡುಬರುವಂತೆ, ಗೋಮಾಂಸದ ಹಂಚಿಕೆಯ ಮೇಲೆ ಹಸು-ಎಮ್ಮೆಗಳ ಚರ್ಮದ ಮಾಲಕತ್ವದ ಆ ಬ್ರಾಹ್ಮಣರು ತಮ್ಮ ತಮ್ಮಲ್ಲಿ ಯುದ್ಧವನ್ನೇ ಮಾಡಿಕೊಳ್ಳುತ್ತಿದ್ದರು. ಬ್ರಾಹ್ಮಣರ ದೇವತೆಗಳನ್ನು ಪ್ರಸನ್ನಗೊಳಿಸಲು ಪಶುಹತ್ಯೆ ಮಾಡುವುದಕ್ಕೆ ಯಾರು ಸಿದ್ಧರಿರಲಿಲ್ಲವೋ ಅವರನ್ನು ಬ್ರಾಹ್ಮಣರು ತಮ್ಮ ಧರ್ಮಾನುಯಾಯಿಗಳೆಂದು ಒಪ್ಪಿಕೊಳ್ಳುತ್ತಿರಲಿಲ್ಲ. ಆ ಕಾರಣದಿಂದಾಗಿಯೇ ಬೌದ್ಧಧರ್ಮವು ಅಸ್ತಿತ್ವಕ್ಕೆ ಬಂದಿತು. ಬೌದ್ಧ ಧರ್ಮವು ಮನುಷ್ಯನಿಗೆ ವಿಚಾರ ಮಾಡುವ ಸ್ವಾತಂತ್ರವನ್ನು ನೀಡಿ ಪೂರ್ಣವಾಗಿ ವಿಚಾರ ಮಾಡಿಯೇ ಯೋಗ್ಯ ಮಾರ್ಗವನ್ನು ಅನುಸರಿಸಲು ಎಲ್ಲರಿಗೂ ಪರವಾನಿಗೆಯನ್ನು ನೀಡಿದೆ. ನೈತಿಕತೆಯನ್ನು ಆಧರಿಸಿರುವ ಅಹಿಂಸೆಯ ಉಪದೇಶಗಳು ಬೌದ್ಧ ಧರ್ಮದಲ್ಲಿ ಇವೆ. ಈ ವಿಷಯವಾಗಿ ಆಶ್ಚರ್ಯ ಪಡುವಂತಹ ಕಾರಣವೇನೂ ಇಲ್ಲ. ಜನರು ಅಹಿಂಸೆಯ ಬಗೆಗೆ ತಪ್ಪು ಅರ್ಥವನ್ನು ಹಚ್ಚಿದ್ದಾರೆ. ಮನುಷ್ಯನು ಪಶುಗಳನ್ನು ಹತ್ಯೆ ಮಾಡಬಾರದು ಅಥವಾ ಕೈಯಲ್ಲಿ ಕತ್ತಿಯನ್ನು ಹಿಡಿದು ದೇಶ ರಕ್ಷಣೆಯ ಹೆಸರಿನಲ್ಲಿ ಯುದ್ಧ ಮಾಡಬಾರದು. ಅದು ಅಹಿಂಸೆಯಲ್ಲ. ಅಹಿಂಸೆಯು ಎರಡು ವಿಚಾರಗಳನ್ನು ಆಧರಿಸಿದೆ. ಆವಶ್ಯಕತೆಗಾಗಿ ಹತ್ಯೆ ಮತ್ತು ಹತ್ಯೆ ಮಾಡುವ ಇಚ್ಛೆಯುಂಟಾಗುವುದು. ಹಾಗೆಯೇ ರಾಷ್ಟ್ರದ ಮೇಲೆ ಪರರ ಚಕ್ರವು ಬಂದು ದೇಶವು ಸಂಕಟದಲ್ಲಿ ಸಿಲುಕಿದರೆ, ಕೈಯಲ್ಲಿ ಕತ್ತಿ ಹಿಡಿದು ರಾಷ್ಟ್ರದ ರಕ್ಷಣೆಗೋಸ್ಕರ ಅಂಗೈಯಲ್ಲಿ ಶಿರವನ್ನು ಹಿಡಿದು ಸಮರಾಂಗಣಕ್ಕೆ ಹಾರಿ ಹೋರಾಟ ಮಾಡುವುದು ಮತ್ತು ಶತ್ರುವನ್ನು ನಿಃಶೇಷಗೊಳಿಸುವುದು.ಹಾಗೆಯೇ ಸಂಹಾರ ಮಾಡುವುದು ಪ್ರತಿಯೊಬ್ಬ ನಾಗರಿಕನ ಪ್ರಪ್ರಥಮ ಕರ್ತವ್ಯವೇ ಆಗಿದೆ. ಅಂದರೆ ಇದರ ಅರ್ಥಾನುಸಾರ ಇಲ್ಲಿ ಹಿಂಸೆಯು ಆವಶ್ಯಕವಾದುದಾಗಿರುತ್ತದೆ. ಅದಕ್ಕೆ ಬೌದ್ಧ ತತ್ವಜ್ಞಾನದಲ್ಲಿ ಉಚ್ಚತಮ ನೆಲೆಯ ಅಹಿಂಸೆ ಎಂದು ಹೇಳಲಾಗುವುದು. ಮತ್ತೊಂದು ಹೊಡೆಯಬೇಕು ಎಂಬ ಇಚ್ಛೆಯು ಬರುವುದು. ಅಂದರೆ ಸ್ವತಃ ಸಮಾಧಾನಕ್ಕಾಗಿ ಪಶುಬಲಿಯನ್ನು ಕೊಡುವುದು. ಹೀಗೆ ಪಶು ಹತ್ಯೆ ಮಾಡುವುದು ಹಿಂಸೆಯಾಗುತ್ತದೆ.
ಬೌದ್ಧ ತತ್ವಜ್ಞಾನವನ್ನು ಹೇಗೆ ಬೇಕೋ ಹಾಗೆ ಎತ್ತಿಕೊಂಡು, ಅದರಲ್ಲಿ ತಮ್ಮ ಜಾತಿ ಭೇದವೇ ಮೊದಲಾದುವುಗಳನ್ನೆಲ್ಲ ತುರುಕಿ ಅದನ್ನು ಹಿಂದೂ ತತ್ವಜ್ಞಾನಿಗಳು ತಮ್ಮದೆಂದೇ ಹೇಳಿಕೊಂಡು ಮೆರೆಯುತ್ತಿದ್ದಾರೆ. ಬ್ರಾಹ್ಮಣ ಧರ್ಮದ ಲೇಖಕನು ಹೇಳುವಂತೆ ವೇದಗಳನ್ನು ಸ್ವತಃ ಪ್ರಜಾಪತಿಯೇ ಕೊಟ್ಟಿದ್ದಾನೆ. ಭಗವಾನ್ ಬುದ್ಧನ ಒಂದು ಮುಖ್ಯವಾದ ಪ್ರಶ್ನೆಯೆಂದರೆ, ಈ ಪ್ರಜಾಪತಿಯು ಜನ್ಮ ಪಡೆದುದಾದರೂ ಎಲ್ಲಿಂದ? ಹಿಂದೂಗಳ ವೇದ ಮತ್ತು ಗೀತೆಗಳನ್ನು ಅಧ್ಯಯನ ಮಾಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ, ಈ ಭಗವದ್ಗೀತೆಯು ಎರಡೋ ಮೂರೋ ಆಗಿರದೆ ಅದು ‘ಧಮ್ಮಪದ’ವೇ ಆಗಿದೆ. ಈ ಧಮ್ಮಪದವನ್ನು ನಕಲು ಮಾಡುವಾಗ ಅದರಲ್ಲಿ ಜಾತಿ ಸಂಸ್ಥೆಗಳನ್ನು ಒಳಗೆ ತೂರಿಸುವುದನ್ನು ಬ್ರಾಹ್ಮಣರು ಮರೆಯಲಿಲ್ಲ. ಸ್ವತಃ ಶ್ರೀ ಕೃಷ್ಣನೇ ತನ್ನ ಶಿಷ್ಯರಿಗೆ ಉಪದೇಶ ನೀಡುವಾಗ ಹೇಳುವುದೆನೆಂದರೆ, ಬ್ರಾಹ್ಮಣೇತರಿಗೆ ಯಾವುದೇ ಜ್ಞಾನವನ್ನು ಕೊಡಬಾರದು ಅಥವಾ ಧರ್ಮೋಪದೇಶವನ್ನು ಮಾಡಬಾರದು.
 ಪ್ರಾರ್ಥನೆ ಮಾಡಿದರಾಗಲಿ ಅಥವಾ ಯಾರದೋ ಕಾಲುಗಳನ್ನು ಹಿಡಿಯುವುದರಿಂದಾಗಲಿ ಅವರು ನಿಮಗೆ ಏನನ್ನೂ ಕೊಡುವುದಿಲ್ಲ. ಇನ್ನು ಹೋರಾಟ ಮಾಡಬೇಕು ಎಂದರೆ ನಮ್ಮ ದೇಹದಲ್ಲಿ ಪೈಲ್ವಾನನಂತಹ ಬಲವು ಬೇಕು. ಪೈಲ್ವಾನನು ಬಹಳ ತಿನ್ನುತ್ತಾನೆ, ಅರಗಿಸಿಕೊಳ್ಳುತ್ತಾನೆ ಮತ್ತು ಸಾಮರ್ಥ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಹಾಗೆಯೇ ನಿಮ್ಮ ಮಾನಸಿಕ ಬಲವು ಹೆಚ್ಚಾಗಬೇಕು. ನೀವು ಸತ್ಯವೂ, ಯೋಗ್ಯವೂ ಆದ ಮಾರ್ಗವನ್ನು ಅವಲಂಬನೆ ಮಾಡಿದರೆ ನಿಮ್ಮಲ್ಲಿ ಮಾನಸಿಕ ಶಕ್ತಿಯು ಪ್ರಾಪ್ತವಾಗುತ್ತದೆ. ಹೆದರು ಪುಕ್ಕರು ಯಾವತ್ತಿಗೂ ಹೋರಾಟ ಮಾಡಲಾರರು. ನಾನು ಈ ಅಸ್ಪಶ್ಯತೆಯಂತಹ ಸಮಸ್ಯೆಯ ಕುಂದುಕೊರತೆಗಳನ್ನೆಲ್ಲ ಇಲ್ಲವಾಗಿಸುವ ಪ್ರಯತ್ನವನ್ನು ಅನೇಕ ವರ್ಷಗಳಿಂದ ಶಕ್ತಿಯುತವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಆದರೆ ಇಂದಿಗೂ ನನ್ನ ಆ ಉದ್ದೇಶದಲ್ಲಿ ಸಫಲತೆಯು ಸಾಧ್ಯವಾಗಿಲ್ಲ. ನನ್ನ ಮನಸ್ಸು ಇಂದಿಗೂ ಅತ್ಯಂತ ಶಕ್ತಿಯುತವಾಗಿದೆ. ಹಾಗಾಗಿ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ. ಒತ್ತಾಯ ಪೂರ್ವಕ ಸಂಕೀರ್ಣ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನೈತಿಕ ಮತ್ತು ಮಾನಸಿಕ ಬಲವು ಇರಬೇಕು. ಅದು ನಿಮಗೆ ಪ್ರಾಪ್ತವಾಗಬೇಕು ಎಂಬ ಕಾರಣದಿಂದ ನಿಮಗೆ ಒಂದು ಹೊಸ ಮಾರ್ಗವನ್ನು ತೋರಿಸಿಕೊಡುತ್ತಿದ್ದೇನೆ. ನೀವು ಒಂದೊಮ್ಮೆ ಬುದ್ಧ ಮಾರ್ಗವನ್ನು ಅನುಸರಣೆ ಮಾಡಿದರೆ, ಜಗತ್ತಿನಲ್ಲಿ ನಿಮಗೆ ಪ್ರತಿಷ್ಠೆಯು ಪ್ರಾಪ್ತವಾಗುತ್ತದೆ. ಅಷ್ಟು ಮಾತ್ರವಲ್ಲ, ನಿಮಗೆ ಬಲವೂ ಪ್ರಾಪ್ತವಾಗುತ್ತದೆ. ಜೊತೆಗೆ ನಿಮ್ಮ ಮಕ್ಕಳು ಮರಿಗಳ ಭವಿಷ್ಯವೂ ಉಜ್ವಲ ವಾಗುತ್ತದೆ. ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕುವ ಸ್ಥಾನವನ್ನು ತೋರಿಸಿಕೊಟ್ಟುದರ ವಿಷಯದಲ್ಲಿ ಅವರು ನಿಮಗೆ ಆಭಾರಿಯಾಗಿ ಇರುತ್ತಾರೆ.
ನಾನು ಹೀಗೆ ಕೇಳಿದ್ದೇನೆ, ಜನರು ಶೋಷಣೆಯ ವಿರುದ್ಧವಾಗಿ ಹೋರಾಟ ಮಾಡಬಾರದು ಎಂಬ ಕಾರಣದಿಂದ ಅನೇಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವುದಕ್ಕಾಗಿ ಕಾಂಗ್ರೆಸ್ ಅವರಿಗೆ ಹಣವನ್ನು ಹಂಚುತ್ತಲಿದೆ.ಸರಕಾರವು ನನಗೂ ಸಹಾ ಹಣವನ್ನು ತೆಗೆದುಕೊಳ್ಳುವಂತೆ ಹೇಳುತ್ತಿತ್ತು.ಅದರ ಮುಖ್ಯವಾದ ಉದ್ದೇಶವೆಂದರೆ ನನ್ನ ಬಾಯಿ ಮುಚ್ಚಿಸುವುದು.ಆದರೆ ನಾನು ಹಣವನ್ನು ಯಾವತ್ತೂ ತೆಗೆದುಕೊಳ್ಳಲಿಲ್ಲ, ಈ ವಿಷಯವು ನಿಮಗೆ ಗೊತ್ತಿರುವಂತಹದ್ದೇ. ನನ್ನ ಉದರ ನಿರ್ವಹಣೆಗಾಗಿ ನಾನು ಸ್ವತಃ ಶ್ರಮಪಟ್ಟು ಹಣ ಸಂಪಾದಿಸುತ್ತೇನೆ. ಹಾಗೆಯೇ ಅಸ್ಪಶ್ಯರ ಹಿತಕ್ಕಾಗಿ ಮತ್ತು ಹಕ್ಕುಗಳಿಗಾಗಿ ಕೊನೆಯವರೆಗೂ ಹೋರಾಟ ಮಾಡುತ್ತಿರುತ್ತೇನೆ. ಒಂದು ವಿಚಾರವನ್ನು ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತೇನೆ. ಏನೇ ಆದರೂ ಸರಿ ನಿಮ್ಮ ಸ್ವಾಭಿಮಾನವನ್ನು ಯಾರೂ ಯಾವತ್ತೂ ಮಾರಾಟಕ್ಕೆ ತೆಗೆದುಕೊಳ್ಳಲಾರರು. ಈ ಬಗೆಗೆ ನೀವು ಅವಶ್ಯವಾಗಿ ಎಚ್ಚರದಿಂದ ಇರಬೇಕು. ಜೊತೆಗೆ ಸಮಾಜದ ಗೌರವವು ಯಾವತ್ತೂ ಎತ್ತರದಲ್ಲಿಯೇ ಇರಬೇಕು. ಅದಕ್ಕಾಗಿ ನೀವೆಲ್ಲರೂ ಕಣ್ಣಿನಲ್ಲಿ ಎಣ್ಣೆ ಬಿಟ್ಟುಕೊಂಡು ದಕ್ಷತೆಯಿಂದ ಕಾಯುತ್ತಿರಬೇಕು. ನಿಮ್ಮ ಸರ್ವಸ್ವವನ್ನೂ ಪಣವಾಗಿಟ್ಟು ನಿಮ್ಮ ಮತ್ತು ಸಮಾಜದ ಸ್ವಾಭಿಮಾನವನ್ನು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ನಾನು ಭಗವಾನ್ ಬುದ್ಧನ ವಿನಮ್ರ ಶಿಷ್ಯನಾಗಿದ್ದೇನೆ. ನಾನು ನಿಮಗೆ ಈ ಮಾರ್ಗವನ್ನು ತೋರಿಸಿಕೊಡುತ್ತಿದ್ದೇನೆ. ಒಂದೊಮ್ಮೆ ನಿಮಗೆ ಈ ಮಾರ್ಗವು ಯೋಗ್ಯವಾದುದು ಎಂದೆನಿಸಿದರೆ ಮಾತ್ರ ಅದನ್ನು ಅನುಕರಿಸಿರಿ. ಆದರೆ, ಈ ಮಾರ್ಗವನ್ನು ಸ್ವೀಕರಿಸುವುದಕ್ಕೆ ಮೊದಲು ಅದರ ಸರ್ವಾಂಗೀಣತೆಯ ಬಗೆಗೆ ವಿಚಾರ ಮಾಡಿರಿ, ಭಗವಾನ್ ಬುದ್ಧನು ತನ್ನ ಅನುಯಾಯಿಗಳಿಗೆ ಹೇಳಿದ್ದುದು ಏನೆಂದರೆ, ಯಾವುದೇ ವಿಚಾರಗಳನ್ನು ಪೂರ್ಣವಾಗಿ ಚಿಂತಿಸಿದ ಮೇಲೆಯೇ ಅದನ್ನು ಸ್ವೀಕರಿಸಿರಿ. ಬದಲಾಗಿ ಕುರುಡುತನದಿಂದ ಸ್ವೀಕಾರ ಮಾಡಬಾರದು. ನಿಸರ್ಗತಃ ಮನುಷ್ಯನು ಸ್ವತಂತ್ರ ಜೀವಿ. ಹಾಗಾಗಿ ನಾನು ನಿಮಗೆ ಹೇಳುವುದೇನೆಂದರೆ, ಸ್ವತಂತ್ರ ವಿಚಾರಸರಣಿಯ, ಸ್ವತಂತ್ರ ವೃತ್ತಿಯ ಮೂಲಕ ನಿರ್ಭಯ ನಾಗರಿಕರಾಗಿರಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News