ಅಬುಧಾಬಿ: ಭಾರತೀಯ ವಿದ್ಯಾರ್ಥಿ ಸಾಯಿನಾಥ್ ಎಂಬೋಟ್, ಅಗ್ರಿಬೋಟ್ ಜನಕ !

Update: 2019-04-12 03:50 GMT

ದುಬೈ: ಅಬುಧಾಬಿಯಲ್ಲಿರುವ ಭಾರತೀಯ ವಿದ್ಯಾರ್ಥಿಯೊಬ್ಬ ಸಾಗರ ಜಲಚರಗಳ ಜೀವ ರಕ್ಷಿಸುವ ಮತ್ತು ಕೃಷಿ ಕಾರ್ಯಗಳಲ್ಲಿ ಕೂಲಿಗಳ ಸಂಖ್ಯೆಯನ್ನು ಕನಿಷ್ಠಗೊಳಿಸುವ "ಅಗ್ರಿಬೋಟ್" ಎಂಬ ರೋಬೋಟ್ ಕಂಡುಹಿಡಿಯುವ ಮೂಲಕ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದಾನೆ.

ಈ ವಿನೂತನ ಸಾಧನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಅವಕಾಶವಿದೆ ಎನ್ನುವುದು ವಿದ್ಯಾರ್ಥಿಯ ಪ್ರತಿಪಾದನೆ.

ಜೆಮ್ಸ್ ಯುನೈಟೆಡ್ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿ ಸಾಯಿನಾಥ್ ಮಣಿಕಂಠನ್, ಸಾಗರ ರೋಬೋಟ್ ಕ್ಲೀನರ್ (ಎಂಬೋಟ್) ನಿರ್ಮಿಸಿದ್ದು, ಇದು ಸಾಗರ ಪರಿಸರವನ್ನು ಸಂರಕ್ಷಿಸಲು ನೆರವಾಗುತ್ತದೆ. ಅಂತೆಯೇ ಈತ ಸಿದ್ಧಪಡಿಸಿದ ಅಗ್ರಿಬೋಟ್, ಅತ್ಯಂತ ಬಿಸಿಲು ಪ್ರದೇಶಗಳಾದ ಯುಎಇನಂಥ ದೇಶಗಳಲ್ಲಿ ಕೃಷಿ ಕಾರ್ಮಿಕರ ಶ್ರಮವನ್ನು ಕನಿಷ್ಠಗೊಳಿಸಲು ನೆರವಾಗುತ್ತದೆ.

"ಎಂಬೋಟ್ ಸಮುದ್ರದ ಮೇಲ್ಮೈನಲ್ಲಿ ತೇಲುವ ತ್ಯಾಜಗಳನ್ನು ನಿರ್ಮೂಲನೆಗೊಳಿಸುತ್ತದೆ. ಇದು ದೋಣಿಯಾಕಾರದಲ್ಲಿದ್ದು, ರೇಡಿಯೊ ನಿಯಂತ್ರಣ ಮೂಲಕ ರಿಮೋಟ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಅಳವಡಿಸಿರುವ ಎರಡು ಮೋಟರ್‌ಗಳ ಸಹಾಯದಿಂದ ಎಂಬೋಟ್ ನೀರಿನಲ್ಲಿ ಚಲಿಸಿ, ತೇಲುವ ತ್ಯಾಜ್ಯ ಸಂಗ್ರಹಿಸುತ್ತದೆ ಎಂದು ಮಣಿಕಂಠನ್ ವಿವರಿಸಿದ್ದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

"ಬ್ಯಾಟರಿಗಳ ಬದಲು ಸೌರ ಪ್ಯಾನಲ್‌ಗಳನ್ನೂ ಬಳಸಬಹುದಾಗಿದೆ. ಇದು ನೀರನ್ನು ಶುದ್ಧಗೊಳಿಸಲು ನೆರವಾಗಲಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಉತ್ತಮ ಪರಿಸರ ನಿರ್ಮಿಸಲು ಬಳಸಬಹುದಾಗಿದೆ. ಇದು ನಮ್ಮ ಸಾಗರ ಪ್ರಬೇಧಗಳು ಹಾಗೂ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆ" ಎಂದು ಬಾಲಕ ಬಣ್ಣಿಸಿದ್ದಾನೆ.

ಹಲವು ಪರಿಸರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಾಲಕ ಡ್ರಾಪ್ ಇಟ್ ಯೂತ್ ಹಾಗೂ ಟ್ಯೂನ್ಸಾ ಎಕೊ ಕ್ರಿಯೇಶನ್‌ನ ರಾಯಭಾರಿ. ಅಂತೆಯೇ ಎಮಿರೇಟ್ಸ್ ಪರಿಸರ ಗುಂಪಿನ ಸಕ್ರಿಯ ಸದಸ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News