ದೇಣಿಗೆ ವಿವರವನ್ನು ಮೇ 30ರ ಮೊದಲು ಚುನಾವಣಾ ಆಯೋಗಕ್ಕೆ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

Update: 2019-04-12 14:59 GMT

ಹೊಸದಿಲ್ಲಿ,ಎ.12: ಚುನಾವಣಾ ಬಾಂಡ್ ಯೋಜನೆಯನ್ನು ಸದ್ಯಕ್ಕೆ ಮುಂದುವರಿಸಲು ಅವಕಾಶ ನೀಡಿರುವ ಸರ್ವೋಚ್ಚ ನ್ಯಾಯಾಲಯವು,ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಲಾದ ದೇಣಿಗೆಗಳು ಮತ್ತು ದೇಣಿಗೆಗಳನ್ನು ನೀಡಿದವರ ಗುರುತು ವಿವರಗಳನ್ನು ಮೇ.30ರೊಳಗೆ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ಶುಕ್ರವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಆದೇಶಿಸಿದೆ.

ಈ ಹಂತದಲ್ಲಿ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಈಗ ನಡೆಯುತ್ತಿರುವ ಚುನಾವಣೆಗಳು ಪೂರ್ಣಗೊಂಡ ಬಳಿಕವೇ ಯೋಜನೆಯು ಕೆಲಸ ಮಾಡಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಕೇಂದ್ರ ಸರಕಾರವು ಮಾಡಿಕೊಂಡಿದ್ದ ನಿವೇದನೆಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆಯನ್ನು ತಡೆಯಲು ರಾಜಕೀಯ ನಿಧಿ ಸಂಗ್ರಹಕ್ಕಾಗಿ ನರೇಂದ್ರ ಮೋದಿ ಸರಕಾರವು ಜಾರಿಗೊಳಿಸಿರುವ ಚುನಾವಣಾ ಬಾಂಡ್‌ಗಳ ಯೋಜನೆಯ ವಿರುದ್ಧ ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಮು.ನ್ಯಾ.ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಕ ಗುಪ್ತಾ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಪೀಠವು ಗುರುವಾರ ಪೂರ್ಣಗೊಳಿಸಿದ್ದು,ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ಚುನಾವಣಾ ಬಾಂಡ್‌ಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಲು ತನ್ನ ಮಧ್ಯಂತರ ಆದೇಶದಲ್ಲಿ ನಿರಾಕರಿಸಿರುವ ನ್ಯಾಯಾಲಯವು, ನಂತರ ಈ ವಿಷಯವನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ ಎಂಬ ಬಗ್ಗೆ ಸುಳಿವು ನೀಡಿದೆ.

ಇಂತಹ ವಿಷಯಗಳಲ್ಲಿ ಆಳವಾದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ ಗೊಗೊಯಿ,ಈಗ ಮಾಡಲಾಗಿರುವ ಮಧ್ಯಂತರ ವ್ಯವಸ್ಥೆಯಿಂದ ಯೋಜನೆಯು ಯಾವುದೇ ಪಕ್ಷದ ಪರವಾಗಿರುವುದಿಲ್ಲ ಎನ್ನುವುದನ್ನು ನ್ಯಾಯಾಲಯವು ಖಚಿತಪಡಿಸಬೇಕಿದೆ ಎಂದರು. ಸೂಕ್ತ ದಿನಾಂಕದಂದು ಈ ವಿಷಯವನ್ನು ಅಂತಿಮವಾಗಿ ವಿಲೇವಾರಿಗೊಳಿಸಲಾಗುವುದು ಎಂದು ಪೀಠವು ತಿಳಿಸಿತು.

ನಿಗದಿತ ಜನವರಿ,ಎಪ್ರಿಲ್,ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ 10 ದಿನಗಳ ಕಾಲ ಮಾತ್ರ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಬಹುದು ಎಂದೂ ನ್ಯಾಯಾಲಯವು ಆದೇಶಿಸಿತು. ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿಯ ಎಲ್ಲ ಹೆಚ್ಚುವರಿ ದಿನಾಂಕಗಳನ್ನು ರದ್ದುಗೊಳಿಸಲಾಗಿದೆ.

ಚುನಾವಣಾ ಬಾಂಡ್‌ಗಳು ಹಣಕಾಸು ಸಾಧನಗಳಾಗಿದ್ದು,ನಾಗರಿಕರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಇವುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನಿಂದ ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಬಹುದು ಮತ್ತು ಅವು ಈ ಬಾಂಡ್‌ಗಳನ್ನು ನಗದು ಹಣವಾಗಿ ಪರಿವರ್ತಿಸಿಕೊಳ್ಳಬಹುದು. ಈ ಬಾಂಡ್‌ಗಳು ಅನಾಮಧೇಯವಾಗಿದ್ದು,ಜ.2018ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಚುನಾವಣಾ ಬಾಂಡ್‌ಗಳ ಯೋಜನೆಗೆ ತಡೆಯಾಜ್ಞೆ ನೀಡುವಂತೆ ಎಡಿಆರ್ ತನ್ನ ಅರ್ಜಿಯಲ್ಲಿ ಕೋರಿಕೊಂಡಿತ್ತು. ಚುನಾವಣಾ ಪ್ರಚಾರ ಅಭಿಯಾನಕ್ಕೆ ನಿಧಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ವಿವಿಧ ತಿದ್ದುಪಡಿಗಳು ರಾಜಕೀಯ ಪಕ್ಷಗಳಿಗೆ ಮಿತಿಯಿಲ್ಲದ ಕಾರ್ಪೊರೇಟ್ ದೇಣಿಗೆಗಳು ಹಾಗೂ ಭಾರತೀಯ ಮತ್ತು ವಿದೇಶಿ ಕಂಪನಿಗಳಿಂದ ಅನಾಮಧೇಯ ಆರ್ಥಿಕ ನೆರವುಗಳಿಗೆ ಹೆಬ್ಬಾಗಿಲುಗಳನ್ನು ತೆರೆದಿದೆ ಮತ್ತು ಇದು ಭಾರತೀಯ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಅದು ಬೆಟ್ಟು ಮಾಡಿತ್ತು.

 ನ್ಯಾಯಾಲಯದಲ್ಲಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದ ಮೋದಿ ಸರಕಾರವು,ರಾಜಕೀಯ ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ಚುನಾವಣಾ ಸುಧಾರಣೆಗಳನ್ನು ತರುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ವಾದಿಸಿತ್ತು. ಅಲ್ಲದೆ,ರಾಜಕೀಯ ಪಕ್ಷಗಳು ಎಲ್ಲಿಂದ ಹಣವನ್ನು ಪಡೆಯುತ್ತವೆ ಎನ್ನುವುದನ್ನು ಮತದಾರರು ತಿಳಿಯುವ ಅಗತ್ಯವಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ನ್ಯಾಯಾಲಯದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News