ಮಲೆನಾಡಿನಲ್ಲಿ ಗಾಳಿ ಸಹಿತ ಭಾರೀ ಮಳೆ

Update: 2019-04-13 12:02 GMT

ಚಿಕ್ಕಮಗಳೂರು, ಎ.13: ಕಳೆದ ಕೆಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಮಲೆನಾಡಿನಲ್ಲಿ ಶುಕ್ರವಾರ ಭಾರೀ ಗಾಳಿಯೊಂದಿಗೆ ಮಳೆಯಾಗಿದ್ದು, ಜನರನ್ನು ಆತಂಕಕ್ಕೀಡು ಮಾಡಿತ್ತು. 

ಶುಕ್ರವಾರ ಮಧ್ಯಾಹ್ನದ ಬಳಿಕ ಮಲೆನಾಡಿನಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ ಮಧ್ಯಾಹ್ನದ ವೇಳೆ ಮಲೆನಾಡಿನಾದ್ಯಂತ ದಿಢೀರ್ ಬೀಸಿದ ಭಾರೀ ಗಾಳಿ ಜನರನ್ನು ಅಕ್ಷರಶಃ ಭೀತಿಗೊಳಗಾಗುವಂತೆ ಮಾಡಿತು. ಮರಗಳ ಎಲೆಗಳು ರಪರಪನೆ ಧರೆಗುರುಳಿದವು. ಅಡಿಕೆ, ತೆಂಗಿನ ಮರಗಳು ಮುರಿದು ಬೀಳುತ್ತವೆಯೇನೋ ಎಂಬಂತೆ ಅಲ್ಲಾಡಲಾರಂಭಿಸಿದ್ದವು. ಮಲೆನಾಡಿನ ಕೆಲವು ತೋಟಗಳಲ್ಲಿ ಭಾರೀ ಗಾಳಿಯಿಂದಾಗಿ ಧರೆಗುರುಳಿದ ಬಗ್ಗೆ ವರದಿಯಾಗಿದೆ. 

ಇನ್ನು ಮಲೆನಾಡಿನ ಕಾಫಿ ತೋಟಗಳೂ ಹಾಗೂ ರಸ್ತೆ ಬದಿಯಲ್ಲಿನ ಕೆಲ ಮರಗಳು ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ಅಡ್ಡಿಯಾದ ಬಗ್ಗೆ ಘಟನೆಗಳೂ ಅಲ್ಲಲ್ಲಿ ನಡೆದಿವೆ. ಕೆಲವೆಡೆ ಮನೆಗಳಿಗೆ ಹಾಕಲಾಗಿದ್ದ ಸಿಮೆಂಟು, ತಗಡಿನ ಶೀಟುಗಳು ಹಾರಿ ನೆಲಕ್ಕುರುಳಿದ ಘಟನೆಗಳು ನಡೆದಿರು ಬಗ್ಗೆ ವರದಿಯಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಲೆನಾಡು ಭಾಗದಲ್ಲಿ ಭಾರೀ ಗಾಳಿ ಬೀಸಿದ ಬಗ್ಗೆ ವರದಿಯಾಗಿದ್ದು, ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ತಿಳಿದು ಬಂದಿಲ್ಲ. ಗಾಳಿಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಮಲೆನಾಡಿನಾದ್ಯಂತ ಕೆಲವೆಡೆ ಗಡುಗು ಸಹಿತ ಭಾರೀ ಮಳೆ ಸುರಿದಿದ್ದರೆ ಮತ್ತೆ ಕೆಲವೆಡೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಶುಕ್ರವಾರ ಮಲೆನಾಡು ಭಾಗದಲ್ಲಿ ಗಾಳಿ, ಮಳೆಯೊಂದಿಗೆ ಗುಡುಗಿನ ಆರ್ಭಟವಿತ್ತಾದರೂ ಸಿಡಿಲು, ಮಿಂಚಿನ ಸುಳಿವಿರಲಿಲ್ಲ.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಅಲ್ಲಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗಿದ್ದು, ಕಳಸ, ಬಾಳೆಹೊನ್ನೂರು, ಬಾಳೂರು, ಜಯಪುರ, ನೆಮ್ಮಾರು, ಕಿಗ್ಗಾ, ಹರಿಹರಪುರ, ಕೊಪ್ಪ, ಹಾಂದಿ, ಗೋಣಿಬೀಡು, ಶೃಂಗೇರಿ, ಎನ್.ಆರ್.ಪುರ ಮತ್ತಿತರ ಪಟ್ಟಣ, ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕೆಲವೆಡೆ ಮಳೆಯಾಗಿದ್ದರೆ ನಗರ ಹಾಗೂ ಸುತ್ತಮುತ್ತ ಮಧ್ಯಾಹ್ನದಿಂದ ಸಂಜೆವರೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಮಲೆನಾಡು ವ್ಯಾಪ್ತಿಯ ತಾಲೂಕುಗಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆ ವೇಳೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮಲೆನಾಡಿನಲ್ಲಿ ಬಿಸಿಲ ಧಗೆ ಕೊಂಚ ಕಡಿಮೆಯಾಗಿದ್ದು, ಕಾಫಿ, ಅಡಿಕೆ ತೋಟಗಳಿಗೆ ಉತ್ತಮ ನೀರು ಲಭ್ಯವಾದಂತಾಗಿದೆ. ಅಲ್ಲದೇ ಜಿಲ್ಲೆಯ ತರೀಕೆರೆ ಹಾಗೂ ಬರಪೀಡಿತ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಉತ್ತಮ ಮಳೆ ಸುರಿದಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News