'ನ್ಯಾಯ್' ಯೋಜನೆಗೆ ಪ್ರಧಾನಿ ಮೋದಿ ಬಂಟನಿಂದಲೇ ಹಣ ವಸೂಲಿ: ರಾಹುಲ್‌ ಗಾಂಧಿ

Update: 2019-04-13 12:42 GMT

ಕೋಲಾರ, ಎ.13- ದೇಶದ ಪ್ರತಿ ಬಡ ಕುಟುಂಬಕ್ಕೂ 'ನ್ಯಾಯ್' ಯೋಜನೆ ಮೂಲಕ ಹಣ ನೀಡುವ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಇದಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಸ್ನೇಹಿತ ಉದ್ಯಮಿ ಅನಿಲ್ ಅಂಬಾನಿ ಜೇಬಿನಿಂದಲೇ ಹಣ ವಸೂಲಿ ಮಾಡಲಾಗುವುದೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಶನಿವಾರ ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರ ಮತಯಾಚನೆ ಮಾಡಿದ ಬಳಿಕ ಅವರು, ಬೃಹತ್ ಕಾಂಗ್ರೆಸ್ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದರು. ಪ್ರತಿ ತಿಂಗಳಿಗೆ 6 ಸಾವಿರ ರೂ. ನಂತೆ  5 ವರ್ಷದಲ್ಲಿ ಒಟ್ಟು 3.60 ಲಕ್ಷ ರೂ. ಗಳನ್ನು ಬಡವರ ಖಾತೆಗೆ 'ನ್ಯಾಯ್' ಯೋಜನೆ ಮೂಲಕ ಹಾಕಬಹುದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಆದರೆ,ಇದನ್ನು ಹೇಗೆ ಸಾಧ್ಯವೆಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮೋದಿ ಅವರಿಗೆ ಚಿಂತನೆ ಬೇಡ, ಅವರ ಸ್ನೇಹಿತ ಉದ್ಯಮಿ ಅನಿಲ್ ಅಂಬಾನಿ ಅವರಿಂದಲೇ ಹಣ ಬರುವಂತೆ ಮಾಡಲಾಗುವುದು.‌ ಅದು ಅಲ್ಲದೆ, 15 ಲಕ್ಷ ರೂ‌. ಪ್ರತಿಯೊಬ್ಬರ ಖಾತೆಗೆ ಹಾಕುವ ಬಿಜೆಪಿಯ ಸುಳ್ಳಿನ ಮಾತನ್ನು ಕಾಂಗ್ರೆಸ್ ಸತ್ಯವಾಗಿಸಲು ಮುಂದಾಗಿದೆ. ಕಾಂಗ್ರೆಸ್ ತೆಗೆದುಕೊಂಡ ತೀರ್ಮಾನ ಒಂದು ಐತಿಹಾಸಿಕ ನಿರ್ಣಯವಾಗಲಿದೆ ಎಂದರು.

ಇನ್ನೂ, 30 ಸಾವಿರ ಕೋಟಿ ರೂ. ಹಣವನ್ನು ಅಂಬಾನಿ ಕದ್ದು ದೇಶಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಎಲ್ಲ ಕಳ್ಳರ ಹೆಸರು ಮೋದಿ, ಮೋದಿ, ಮೋದಿ ಎಂದು ಏಕಿದೆ. ಸರಿಯಾಗಿ ಹುಡುಕಿದರೆ ಇನ್ನೂ ಹಲವರು ಮೋದಿಗಳು ದೇಶದಲ್ಲಿ ಸಿಗಲಿದ್ದಾರೆ. ಅಷ್ಟೇ ಅಲ್ಲದೆ, ನೂರಕ್ಕೆ ನೂರು ಪ್ರತಿಶತ ಕಾವಲುಗಾರ ಕಳ್ಳ (ಚೌಕಿದಾರ್ ಚೋರ್). ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಸೇರಿದಂತೆ ಇವರದ್ದೆಲ್ಲ ದೊಡ್ಡ ಕಳ್ಳರ ಗುಂಪು ಎಂದು ವಾಗ್ದಾಳಿ ನಡೆಸಿದರು.

ಸುಳ್ಳು ಭರವಸೆ: 2014ರ ಚುನಾವಣೆ ವೇಳೆ ಸ್ವಿಸ್ ಬ್ಯಾಂಕಿನಿಂದ ಕಪ್ಪುಹಣ ತಂದು ದೇಶದ ಬಡವರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು, ಯುವಕರಿಗೆ 10 ಕೋಟಿ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ ವಾಗ್ದಾನವನ್ನು ಜನರ ಮುಂದೆ ಇಟ್ಟು ಬಿಜೆಪಿ ಚುನಾವಣೆ ಎದುರಿಸಿದೆ. ಆದರೆ, ಚುನಾವಣೆ ಬಳಿಕ 15 ಲಕ್ಷ ರೂ. ಬಡವರ ಖಾತೆಗೆ ಜಮಾ ಮಾಡುವ ಮಾತು ಚುನಾವಣೆಗಾಗಿ ಮಾತ್ರ ಆಡಿದ ಜುಮ್ಲಾ (ಸುಳ್ಳಿನ) ಮಾತುಗಳು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದರು ಎಂದು ಟೀಕಿಸಿದರು.

ಯುವಕರು 5 ವರ್ಷಗಳ ಕಾಲ ಮೋದಿ ಅವರನ್ನು ನಂಬಿ ಸಾಕಾಗಿದ್ದಾರೆ. ನಾವು ಅಧಿಕಾರ ಬಂದಾಕ್ಷಣ ಮೊದಲ‌ ವರ್ಷದಲ್ಲಿ ಕೇಂದ್ರದಲ್ಲಿ ಖಾಲಿ ಇರುವ 22 ಲಕ್ಷ ಸರ್ಕಾರಿ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗುವುದು. 10 ಲಕ್ಷ  ಪಂಚಾಯತ್ ರಾಜ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕರ್ನಾಟಕದ‌ ಯುವಕರು ಉದ್ಯಮ ಸ್ಥಾಪಿಸಲು ಇಚ್ಛಿಸಿದಲ್ಲಿ ಅವರಿಗೆ ಯಾವುದೇ ಸಂಸ್ಥೆಯಿಂದಲೂ ಪರವಾನಿಗೆ ಅವಶ್ಯಕತೆ ಇರುವುದಿಲ್ಲ ಹಾಗೂ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿಯೂ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು ಎಂದು ರಾಹುಲ್ ಘೋಷಿಸಿದರು. 

ಕಾಂಗ್ರೆಸ್‍ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕೆಲವೇ ಕೆಲವು ವ್ಯಕ್ತಿಗಳಿಗಾಗಿ ದೇಶವನ್ನು ವಿಭಜಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ , ಜೆಡಿಎಸ್ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡಿದ್ದರು.

'ರೈತರಿಗೆ ಪ್ರತ್ಯೇಕ ಬಜೆಟ್'

ಲೋಕಸಭೆ ಚುನಾವಣೆ  ಬಳಿಕ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ಮೊದಲ ಅಧಿವೇಶನದಲ್ಲಿಯೇ ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗುವುದು. ಅಷ್ಟೇ ಅಲ್ಲದೆ, ಸಾಲ ಮರುಪಾವತಿಸದೆ ಮುಕ್ತವಾಗಿ ತಿರುಗಾಡುವ ಅನಿಲ್ ಅಂಬಾನಿ ಸೇರಿದಂತೆ ಪ್ರಮುಖ ಪ್ರಭಾವಿಗಳನ್ನು ಜೈಲಿಗೆ ಕಳುಹಿಸಲಾಗುವುದು. ಸಾಲ ಹೆಸರಿನಲ್ಲಿ ಬ್ಯಾಂಕುಗಳು ರೈತರಿಗೆ ನೀಡುವ ಕಿರುಕುಳ ಶಾಶ್ವತವಾಗಿ ತಪ್ಪಿಸಲಾಗುವುದು.

-ರಾಹುಲ್ ಗಾಂಧಿ, ಎಐಸಿಸಿ, ಅಧ್ಯಕ್ಷ

ರಾಹುಲ್ ಪ್ರಮುಖ ಭರವಸೆಗಳು...!

* ರೈತರಿಗೆ ಪ್ರತ್ಯೇಕ ಬಜೆಟ್

* ಸಾಲ ಹೆಸರಿನಲ್ಲಿ ಬ್ಯಾಂಕುಗಳು ರೈತರಿಗೆ ನೀಡಿರುವ ಕಿರುಕುಳ ಶಾಶ್ವತ ದೂರ

* ಅಧಿಕಾರ ಬಂದಾಕ್ಷಣ ಮೊದಲ‌ ವರ್ಷದಲ್ಲಿ ಕೇಂದ್ರದಲ್ಲಿ ಖಾಲಿ ಇರುವ 22 ಲಕ್ಷ ಸರ್ಕಾರಿ ಹುದ್ದೆ ಭರ್ತಿ

* 10 ಲಕ್ಷ ಪಂಚಾಯತ್ ರಾಜ್ ಹುದ್ದೆಗಳ ಭರ್ತಿ

* ಯುವಕರು ಉದ್ಯಮ ಸ್ಥಾಪಿಸಲು ಇಚ್ಛಿಸಿದಲ್ಲಿ ಅವರಿಗೆ ಯಾವುದೇ ಸಂಸ್ಥೆಯಿಂದಲೂ ಪರವಾನಿಗೆ ಬೇಕಿಲ್ಲ

* ಮೋದಿಯ ಕಳ್ಳರ ಗುಂಪಿನಲ್ಲಿರುವ ಬ್ಯಾಂಕ್ ಉದ್ಯಮಿಗಳ ಕೀಲಿಕೈಯನ್ನ ಕಸಿದು ಯುವಕರಿಗೆ ನೀಡಲಾಗುವುದು

* ವರ್ಷಕ್ಕೆ 72 ಸಾವಿರ ರೂ.‌ ನ್ಯಾಯ್ ಯೋಜನೆಯ ಹಣ ಮಹಿಳೆಯರ ಖಾತೆಗೆ ನೇರ ವರ್ಗಾವಣೆ 

* ವಿಧಾನ ಸಭೆ-ಲೋಕಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ

* ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿಯೂ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ

Writer - -ಸಮೀರ್, ದಳಸನೂರು

contributor

Editor - -ಸಮೀರ್, ದಳಸನೂರು

contributor

Similar News