ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ: ಕುಮಾರಸ್ವಾಮಿ

Update: 2019-04-13 12:59 GMT

ಬೆಂಗಳೂರು, ಎ.13: ಮುಂದಿನ ದಿನಗಳಲ್ಲಿ ತಾನೂ ಮುಖ್ಯಮಂತ್ರಿಯಾಗಿ, ಈ ಮೈತ್ರಿ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಬೇಕಾದರೆ, ಮೈತ್ರಿ ಅಭ್ಯರ್ಥಿ ಗೆಲ್ಲಿಸಿ ಎಂದು ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಕೋಲಾರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೋಲಾರದ ಮೈತ್ರಿ ಅಭ್ಯರ್ಥಿ ವಿರುದ್ಧ ಬಗ್ಗೆ ಮಾಲೂರಿನಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಅದರೆ, ತಾನು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ, ಕಾರ್ಯಕರ್ತರು, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು. 

ಮೈತ್ರಿ ಸರಕಾರದಲ್ಲಿ ಜನಪರ ಯೋಜನೆಗಳೂ ಸೇರಿದಂತೆ ಸಿದ್ದರಾಮಯ್ಯ ಅವರು‌ ಜಾರಿಗೊಳಿಸಿದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ‌. ಸಾಲಮನ್ನಾ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಸುಳ್ಳು ಅಪಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಕೋಲಾರದ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಬೆಂಬಲ ಬೆಲೆ‌ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಲಾಗಿದೆ. ಕೆ.ಸಿ.ವ್ಯಾಲಿ ಮೇಲಿನ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಶುದ್ದೀಕರಣ ಘಟಕವನ್ನು ಕೆ.ಸಿ.ವ್ಯಾಲಿಯಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.‌ ಮೇಕೆದಾಟು ಯೋಜನೆಗೆ ಅನುಮತಿ ಕೋರಿದ್ದರೂ ತಮಿಳುನಾಡು ಸರಕಾರ ಆಕ್ಷೇಪದಿಂದ ಕೇಂದ್ರ ಸರಕಾರ ಮೀನಾಮೇಷ‌ ಎಣಿಸುತ್ತಿದೆ. ಆದರೆ, ಮೈತ್ರಿ ಅಭ್ಯರ್ಥಿ ಗೆದ್ದರೆ, ಶಾಶ್ವತ ನೀರಾವರಿ ಸಮಸ್ಯೆ ದೂರವಾಗಲಿದೆ  ಎಂದು ನುಡಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ'

ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾಗಲಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News