ಅಂಪೈರ್‌ರೊಂದಿಗೆ ಅನುಚಿತ ವರ್ತನೆ ತೋರಿದ್ದ ಧೋನಿಗೆ ನಿಷೇಧ ಹೇರಬೇಕಾಗಿತ್ತು ಎಂದ ಸೆಹ್ವಾಗ್

Update: 2019-04-13 13:46 GMT

ಹೊಸದಿಲ್ಲಿ, ಎ.13: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿಗೆ ಕನಿಷ್ಠ 2ರಿಂದ 3 ಪಂದ್ಯಗಳಿಂದ ನಿಷೇಧಿಸುವ ಮೂಲಕ ಉಳಿದ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕಾಗಿತ್ತು ಎಂದು ಭಾರತದ ಮಾಜಿ ಆರಂಭಿಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಕೇವಲ 2 ದಿನಗಳ ಹಿಂದೆ ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅಂಪೈರ್‌ರೊಂದಿಗೆ ಅನುಚಿತವಾಗಿ ವರ್ತಿಸಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದ ಧೋನಿಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿತ್ತು.

‘‘ಧೋನಿಗೆ ಕಠಿಣ ಶಿಕ್ಷೆ ನೀಡದೆ ಸುಲಭವಾಗಿ ಬಿಟ್ಟುಬಿಡಲಾಗಿದೆ. ಅವರಿಗೆ 2 ರಿಂದ 3 ಐಪಿಎಲ್ ಪಂದ್ಯಗಳಿಂದ ನಿಷೇಧಿಸಿ ಮೇಲ್ಪಂಕ್ತಿ ಹಾಕಬೇಕಾಗಿತ್ತು. ಆ ಮೂಲಕ ನಾಳೆ ದಿನ ಬೇರೆ ಯಾವ ನಾಯಕನೂ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಬೇಕಾಗಿತ್ತು. ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಹೀಗೆ ವರ್ತಿಸಿದ್ದರೆ ಸಂತೋಷ ಪಡುತ್ತಿದ್ದೆ. ಆದರೆ ಅವರು ಭಾರತೀಯ ತಂಡದ ನಾಯಕರಾಗಿದ್ದ ಸಮಯದಲ್ಲಿ ಈ ರೀತಿ ವರ್ತಿಸಿದ್ದನ್ನು ನಾನು ನೋಡಿಲ್ಲ. ಚೆನ್ನೈ ತಂಡದ ಪರ ಅವರು ಸ್ವಲ್ಪ ಭಾವನಾತ್ಮಕವಾಗಿದ್ದರು. ಚೆನ್ನೈನ ಇಬ್ಬರು ಆಟಗಾರರು ಅದಾಗಲೇ ಮೈದಾನದಲ್ಲಿದ್ದ ಕಾರಣ ಧೋನಿ ಅಂಪೈರ್ ಬಳಿ ನೋ-ಬಾಲ್‌ಗೆ ಸಂಬಂಧಿಸಿ ವಾದಿಸಬಾರದಿತ್ತು. ನಾಲ್ಕನೇ ಅಂಪೈರ್‌ರೊಂದಿಗೆ ವಾಕಿಟಾಕಿಯಲ್ಲಿ ಮಾತನಾಡುವ ಬದಲು ಅವರು ಮೈದಾನದಿಂದ ಹೊರಗಿರಬೇಕಾಗಿತ್ತು’’ ಎಂದು ಸೆಹ್ವಾಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News