ಮಂಡ್ಯ ಮೈತ್ರಿ ಅಭ್ಯರ್ಥಿ ಗೆಲುವಿಗೆ 150 ಕೋಟಿ ರೂ. ವೆಚ್ಚ?: ಜಾಲತಾಣದಲ್ಲಿ ಆಡಿಯೋ ಸಂಭಾಷಣೆ ವೈರಲ್

Update: 2019-04-13 14:49 GMT

ಮಂಡ್ಯ, ಎ.13: ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಸುಮಾರು 150 ಕೋಟಿ ರೂ. ವೆಚ್ಚ ಮಾಡುತ್ತಿರುವ ಬಗ್ಗೆ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆಡಿಯೋ ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಪುತ್ರನದ್ದು ಎಂದು ವಿಶ್ಲೇಷಣೆ ಮಾಡಲಾಗುತ್ತಿದ್ದು, 7.21 ನಿಮಿಷ ಹಾಗೂ 12.41 ನಿಮಿಷದ ಎರಡು ಆಡಿಯೋಗಳು ಜಿಲ್ಲಾದ್ಯಂತ ಹರಿದಾಡುತ್ತಿವೆ. ಈ ಆಡಿಯೋದಲ್ಲಿರುವ ಧ್ವನಿ ಇಬ್ಬರು ಪ್ರಭಾವಿಗಳ ನಡುವೆ ನಡೆದದ್ದು ಎನ್ನಲಾಗುತ್ತಿದೆ.

ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ 150 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿರುವ ಹಾಗೂ ಪ್ರತಿ ಬೂತ್‍ಗೆ 5 ಲಕ್ಷ ಹಣ ವಿತರಣೆ ಮಾಡುವ ಧ್ವನಿ ಅದರಲ್ಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2,800 ಬೂತ್‍ಗಳಿದ್ದು, ಹಣ ಮಾತ್ರವಲ್ಲದೇ ಊರೂರಲ್ಲಿ ಮಟನ್ ಊಟವನ್ನೂ ಹಾಕಿಸಲು ಸಿದ್ದತೆ ಮಾಡಲಾಗಿದೆ ಎಂಬ ಸ್ಫೋಟಕ ವಿಚಾರ ಆಡಿಯೋದಲ್ಲಿದೆ. 

ಕಂಟ್ರಾಕ್ಟರ್ ಗಳಿಗೆ ಚುನಾವಣೆ ಜವಾಬ್ದಾರಿ ಹೊರಿಸಲಾಗಿದ್ದು, ಪ್ರತಿ ಕಿ.ಮೀ.ಗೆ ಒಬ್ಬರಂತೆ ಕಂಟ್ರಾಕ್ಟರ್ ನೇಮಕ ಮಾಡಲಾಗಿದೆ. ಇದರ ಜೊತೆಗೆ ಚುನಾವಣೆ ಬಳಿಕ ಕಂಟ್ರಾಕ್ಟರ್ ಗಳಿಗೆ ಕೋಟಿ ಕೋಟಿ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಈ ಅಡಿಯೋದಲ್ಲಿ ಬಹಿರಂಗವಾಗಿದೆ. ನಿನ್ನೆಯಷ್ಟೇ ನಡೆದಿರುವ ದೂರವಾಣಿ ಸಂಭಾಷಣೆ ಎಂದು ಹೇಳಲಾಗಿದೆ.

ಎದುರಾಳಿ ಸ್ಪರ್ಧಿ ಕಡೆಯವರ ಚಿತಾವಣೆ: ಕುಮಾರಸ್ವಾಮಿ, ಚೇತನ್‍ಗೌಡ ಸ್ಪಷ್ಟನೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್‍ಗೌಡ ಸ್ಪಷ್ಟನೆ ನೀಡಿದ್ದು, ಎದುರಾಳಿ ಅಭ್ಯರ್ಥಿ ಕಡೆಯವರ ಚಿತಾವಣೆ ಎಂದು ಟೀಕಿಸಿದ್ದಾರೆ.

ಕೆ.ಎಂ.ದೊಡ್ಡಿಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾವೆಂದೂ ದುಡ್ಡಲ್ಲಿ ರಾಜಕಾರಣ ಮಾಡಿಲ್ಲ. ಯಾರೋ ಬೇಕು ಅಂತಾ ಹೇಳಿಕೊಂಡಿದ್ದಾರೆ. ಅದನ್ನೆಲ್ಲ ನಂಬಬೇಡಿ. ಕೀಳುಮಟ್ಟದ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.

ಆಡಿಯೋ ವೈರಲ್ ಕುರಿತು ಸಂಸದ ಶಿವರಾಮೇಗೌಡರ ಪುತ್ರ ಕಾಂಗ್ರೆಸ್ ಮುಖಂಡ ಎಲ್.ಎಸ್.ಚೇತನ್‍ಗೌಡ ಪ್ರತಿಕ್ರಿಯೆ ನೀಡಿದ್ದು, ನಾನು ಈಗಷ್ಟೆ ಆಡಿಯೊ ತುಣುಕು ಕೇಳಿದೆ. ಅದು ನನ್ನ ಧ್ವನಿ ಎಂದು ನನಗೆ ಅನಿಸುತ್ತಿಲ್ಲ. ಮೊದಲ ಆಡಿಯೊ ಎರಡನೇ ಆಡಿಯೋಗೆ ಬಹಳ ವ್ಯತ್ಯಾಸವಿದೆ ಎಂದರು.
ಅದರಲ್ಲಿ ಮಾತನಾಡುತ್ತಿರುವ ವಿಚಾರ ಅಷ್ಟು ಸುಲಭ ಅನಿಸಲ್ಲ. ಚುನಾವಣೆ ನಡೆಯುವುದು ಮೈತ್ರಿ ಸರಕಾರದ ಸಾಧನೆ ಮೇಲೆ. ನಮ್ಮ ವಿರೋಧ ಪಕ್ಷದವರು ಮಾಡುತ್ತಿರುವ ತಂತ್ರಗಾರಿಕೆ ಇದು. ನಮ್ಮ ತಂದೆಯ ಹೆಸರಿಗೆ ಚ್ಯುತಿ ತರಲು ವಿರೋಧಿಗಳು ಮಾಡಿರುವ ಆಡಿಯೊ. ಇದು ಟೂರಿಂಗ್ ಟಾಕೀಸ್‍ನ ಭಾಗ. ಪಕ್ಷೇತರ ಅಭ್ಯರ್ಥಿಯ ಕಡೆಯವರು ಯಾರೋ ಮಾಡಿರಬಹುದು ಎಂದು ಅವರು ಆರೋಪಿಸಿದರು.

ಅವರು ಹೋದಲೆಲ್ಲಾ ಜನ ಸೇರುತ್ತಿದ್ದಾರೆ. ಆದರೆ, ಅಂತಹ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ ಧೃತಿಗೆಟ್ಟು ಈ ರೀತಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಪಿ.ರಮೇಶ್ ಭೇಟಿ ಮಾಡಿಲ್ಲ. ಈ ಹಿಂದೆ ಅವರು ನಮ್ಮ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಭೆಗೆ ಬರುತ್ತಿದ್ದರು. ಪಿ.ರಮೇಶ್ ಸಿವಿ.ರಾಮನ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆಡಿಯೋ ಕೇಳಿ ನನಗೇ ಶಾಕ್ ಆಗುತ್ತಿದೆ ಎಂದರು.

ನಾವೆಲ್ಲ ಯುವಕರಾಗಿದ್ದು ನಿಖಿಲ್ ಪರ ಓಡಾಡುವುದನ್ನು ಸಹಿಸಲಾಗದೆ ಹತಾಶೆಗೊಂಡು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಸಿನೆಮಾದವರನ್ನು ಈಗ ಹೇಗೆ ಮನರಂಜನೆಯ ರೀತಿ ನೋಡುತ್ತಿದ್ದೀರಿ ಅದೇ ರೀತಿ ಆಡಿಯೋ ನೋಡಿ ಬಿಡಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News