ಗಾಂಧಿನಗರ: ಅಮಿತ್ ಶಾ ವಿರುದ್ಧ ಕಠಿಣ ಹೋರಾಟ ಎದುರಿಸುತ್ತಿರುವ ಕಾಂಗ್ರೆಸ್‌ನ ಸಿ.ಜೆ.ಚಾವ್ಡಾ

Update: 2019-04-13 17:10 GMT

ಗಾಂಧಿನಗರ(ಗುಜರಾತ),ಎ.13: ಈ ಹಿಂದೆ ಪ್ರತಿಷ್ಠಿತ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾಣಿ ಅವರಂತಹ ಬಿಜೆಪಿಯ ದಿಗ್ಗಜರ ವಿರುದ್ಧ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಮತ್ತು ನಟ ರಾಜೇಶ ಖನ್ನಾರಂತಹ ಜನಪ್ರಿಯ ವ್ಯಕ್ತಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಈ ಬಾರಿ ತನ್ನ ಎರಡು ಬಾರಿಯ ಶಾಸಕ ಸಿ.ಜೆ.ಚಾವ್ಡಾ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಎದುರಾಳಿಯನ್ನಾಗಿ ಹೊಂದಿರುವ ಚಾವ್ಡಾಗೆ ಹೋರಾಟ ಕಠಿಣವಾಗಿರುವಂತಿದೆ.

ಗಾಂಧಿನಗರ ಕ್ಷೇತ್ರವು 1990ರ ದಶಕದಿಂದಲೂ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಈ ಬಾರಿ ಪ್ರಬಲ ಅಭ್ಯರ್ಥಿ ಕಣದಲ್ಲಿದ್ದರೆ ಶಾ ಅವರಿಗೆ ಕಠಿಣ ಸ್ಪರ್ಧೆಯನ್ನು ಒಡ್ಡಬಹುದಿತ್ತು ಎಂಬ ಮಾತು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. ಶಾ ಅವರು ಆರು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರ ಬದಲಾಗಿ ಸ್ವತಃ ಕಣಕ್ಕಿಳಿದಿದ್ದಾರೆ.

ಗುಜರಾತಿನ 26 ಲೋಕಸಭಾ ಕ್ಷೇತ್ರಗಳ ಪೈಕಿ ಗಾಂಧಿನಗರ ಅತ್ಯಂತ ಹೆಚ್ಚಿನ ಸಂಖ್ಯೆಯ(19.21 ಲಕ್ಷ) ಮತದಾರರಿರುವ ಕ್ಷೇತ್ರವಾಗಿದ್ದು,ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. 2017ರ ವಿಧಾನಸಭಾ ಚುನಾವಣೆಗಳಲ್ಲಿ ನಗರ ಪ್ರದೇಶದ ಐದು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ,ಎರಡು ಅರೆ ಗ್ರಾಮೀಣ ಕ್ಷೇತ್ರಗಳು ಕಾಂಗ್ರೆಸ್‌ಗೆ ದಕ್ಕಿದ್ದವು.

ಗಾಂಧಿನಗರ ಉತ್ತರ ಕ್ಷೇತ್ರದ ಶಾಸಕರಾಗಿರುವ ಚಾವ್ಡಾ ಕಾಂಗ್ರೆಸ್‌ನ ಪ್ರಬಲ ಬೆಂಬಲಿಗರಾಗಿರುವ ಠಾಕೂರ್ ಸಮುದಾಯಕ್ಕೆ ಸೇರಿದ್ದಾರೆ.

ರಾಜಕೀಯಕ್ಕೆ ಸೇರುವ ಮುನ್ನ ಉಪ ಜಿಲ್ಲಾಧಿಕಾರಿಯಾಗಿದ್ದ ಪಶುವೈದ್ಯ ಚಾವ್ಡಾ,ಹೋರಾಟವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹೊರತು ತನ್ನ ಮತ್ತು ಶಾ ನಡುವೆ ಅಲ್ಲ ಎಂದೇ ಪರಿಗಣಿಸಿದ್ದಾರೆ.

ಶಾ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದರೆ ಅವರು ಗುಜರಾತಿನ ಸುರಕ್ಷಿತವೆನ್ನಲಾಗಿರುವ ಈ ಕ್ಷೇತ್ರವನ್ನು ಆಯ್ದುಕೊಂಡಿದ್ದೇಕೆ? ಅವರು ಸವಾಲಿನ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು ಎಂದು ಸುದ್ದಿಗಾರರಿಗೆ ಹೇಳಿದ ಚಾವ್ಡಾ, ನಾವು ಬಿಜೆಪಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News