ಬಿಎಚ್‌ಯು ವಿದ್ಯಾರ್ಥಿಯ ಕೊಲೆ ಪ್ರಕರಣ: ಪೊಲೀಸರೊಂದಿಗೆ ಗುಂಡಿನ ಕಾಳಗದ ಬಳಿಕ ಆರೋಪಿಯ ಬಂಧನ

Update: 2019-04-13 16:02 GMT

ವಾರಣಾಸಿ, ಎ.13: ಇಲ್ಲಿಯ ಬನಾರಸ ಹಿಂದು ವಿವಿ(ಬಿಎಚ್‌ಯು)ಯ ವಿದ್ಯಾರ್ಥಿಯ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ಓರ್ವನನ್ನು ಪೊಲೀಸರೊಂದಿಗೆ ಗುಂಡಿನ ಕಾಳಗದ ಬಳಿಕ ಬಂಧಿಸಲಾಗಿದೆ. ಈ ಸಂದರ್ಭ ಓರ್ವ ಎಸ್‌ಐ ಕೂಡ ಗಾಯಗೊಂಡಿದ್ದಾರೆ.

ಬಿಹಾರದ ಬಕ್ಸಾರ್ ನಿವಾಸಿ ರೂಪೇಶ ವರ್ಮಾ ಅಲಿಯಾಸ್ ಸನ್ನಿ ಅಲಿಯಾಸ್ ಪ್ರೊಫೆಸರ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಗ್ಗೆ ಸುಳಿವು ಪಡೆದಿದ್ದ ಪೊಲೀಸರು ಶುಕ್ರವಾರ ರಾತ್ರಿ ಲಂಕಾ ಪ್ರದೇಶದಲ್ಲಿ ಹೊಂಚು ಹಾಕಿದ್ದರು. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವನಿಂದ ಲೂಟಿ ಮಾಡಿದ್ದ ಬೈಕ್‌ನಲ್ಲಿ ಬಂದ ವರ್ಮಾ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ ಎಂದು ಎಸ್‌ಎಸ್‌ಪಿ ಆನಂದ ಕುಲಕರ್ಣಿ ತಿಳಿಸಿದರು.

ವರ್ಮಾ ತನ್ನ ತಲೆಯ ಮೇಲೆ 25,000 ರೂ.ಗಳ ಬಹುಮಾನವನ್ನು ಹೊತ್ತಿದ್ದ. ಬೈಕಿನಲ್ಲಿ ಆತನ ಸಹಸವಾರನಾಗಿದ್ದ ರಾಜಾ ದುಬೆ ಅಲಿಯಾಸ್ ರಾವಣ ಎಂಬಾತ ಪರಾರಿಯಾಗುವಲ್ಲಿ ಸಫಲನಾಗಿದ್ದಾನೆ. ವರ್ಮಾ ಮತ್ತು ದುಬೆ ಬಿಎಚ್‌ಯು ವಿದ್ಯಾರ್ಥಿ ಗೌರವ ಸಿಂಗ್ ಹತ್ಯೆ ಪ್ರಕರಣದಲ್ಲಿ ಬೇಕಾದ ಆರೋಪಿಗಳಾಗಿದ್ದರು.

ಗಾಯಗೊಂಡಿರುವ ವರ್ಮಾ ಮತ್ತು ಎಸ್‌ಐ ಈಶ್ವರ ದಯಾಳ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News