ವೃದ್ಧನಿಗೆ ಥಳಿಸಿ ಗ್ರಾಮ ತೊರೆಯುವಂತೆ ಬೆದರಿಕೆ ಒಡ್ಡಿದ ಬಜರಂಗದಳ ಕಾರ್ಯಕರ್ತರು

Update: 2019-04-13 16:22 GMT

ರಾಯಚೂರು,ಎ.12: ಬಜರಂಗದಳ ಕಾರ್ಯಕರ್ತರು ಮಸೀದಿಗೆ ದಾಳಿ ಮಾಡಿ, ಕುರಾನ್ ಎಸೆದು, ಮೈಕ್ ಗಳನ್ನು ಕಿತ್ತೆಸೆದು ಚಾಪೆ ಹಾಗೂ ಇನ್ನಿತರ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ರಾಯಚೂರು ಜಿಲ್ಲೆಯ, ಮಸ್ಕಿ ತಾಲೂಕಿನ ಸಮೀಪದ ತಲೆಕಾನ್ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಕಳೆದ ಫೆ.14 ರಂದು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿ ನಡೆದಿತ್ತು. ಅಂದು ಮಧ್ಯರಾತ್ರಿ ಕೆಲ ಮುಸ್ಲಿಮರು ಯುವಕರು ದಾಳಿಯ ಬಗ್ಗೆ ಸಂಭ್ರಮಿಸಿ ಪಟಾಕಿ ಸಿಡಿಸಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಮಸೀದಿಗೆ ನುಗ್ಗಿ ಪವಿತ್ರ ಕುರಾನ್, ಮಸೀದಿಯ ಮೈಕ್ ಎಸೆದು ಬಳಿಕ ಮಸೀದಿಯ ಚಾಪೆ ಹಾಗೂ ಇನ್ನಿತರ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿ, ಸೈನಿಕರ ಸಾವನ್ನು ಸಂಭ್ರಮಿಸಿ ಮುಸ್ಲಿಮರು ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಕಲಂ 25/ 2019, 143, 147, 120(A) 153(A), 504 ಸಹಿತ ಐಪಿಸಿ ಸೆಕ್ಷನ್ 147 ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ಆಧಾರದ ಮೇಲೆ ಮಸ್ಕಿ ಠಾಣೆ ಪೊಲೀಸರು 6 ಮಂದಿ ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕವೂ ಬಜರಂಗದಳ ಕಾರ್ಯಕರ್ತರು ಗಲಾಟೆ ಮುಂದುವರೆಸಿದ್ದು, ಬಂಧಿತ ಯುವಕರ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಅಂಗಡಿಗಳಲ್ಲಿ ಮುಸ್ಲಿಮರ ಜೊತೆ ಯಾವುದೇ ವ್ಯಾಪಾರ ನಡೆಸಬಾರದು, ನೀರು ನೀಡಬಾರದು, ದೇಶದ್ರೋಹಿ ಪ್ರಕರಣ ದಾಖಲಿಸಿ ಎಲ್ಲರನ್ನೂ ಬಂಧಿಸಬೇಕೆಂದು ಒತ್ತಾಯಿಸಿದ್ದು, ಯಾರು ಕೂಡಾ ನಮಾಝಿಗೆ ಬರಬಾರದೆಂದು ನಿರ್ಬಂಧಿಸಿದ್ದಾರೆ ಎನ್ನಲಾಗಿದೆ.

ಮಸೀದಿಯ ಸಾಮಾಗ್ರಿಗಳನ್ನು ನಾಶಪಡಿಸಿ, ಬೆದರಿಕೆ ಒಡ್ಡಿದ ಘಟನೆ ಸಂಬಂಧ ಮಸ್ಕಿ ಠಾಣೆಯಲ್ಲಿ ಫೆ.24 ರಂದು 28/2019 ಕಲಂ 143, 147, 427, 435, 295, ಸಹಿತ ಐಪಿಸ್ ಸೆಕ್ಷನ್ 149 ಅಡಿ ಪ್ರಕರಣ ದಾಖಲಾಗಿದ್ದು, ಅದರಂತೆ 9 ಮಂದಿ ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಅವರಿಗೆ ಯಾವುದೇ ಶಿಕ್ಷೆಯಾಗದೇ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದಾದ ಬಳಿಕ ಕಳೆದ ಎಪ್ರಿಲ್ 9 ರಂದು ಹುಸೇನ್ ಸಾಬ್ ಎಂಬವರು ಮಸೀದಿಗೆ ತೆರಳಿ ಮರಳಿ ಮನೆಗೆ ಬರುವ ವೇಳೆ ಸುಮಾರು 10 ಮಂದಿ ಬಜರಂಗದಳ ಕಾರ್ಯಕರ್ತರು ಹುಸೇನ್ ಸಾಬ್ ರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೇ, ಕಾಲಿನಿಂದ ಒದ್ದು ಗ್ರಾಮ ತೊರೆಯುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಕಲಂ 47/2019 ಕಲಂ 143, 147, 341, 504, 323, 506 ಸಹಿತ 149 ಐಪಿಸಿ ಸೆಕ್ಷನ್ ಅಡಿಯಲ್ಲಿ ವಿಶ್ವನಾಥ, ಕಂಠೆಪ್ಪ, ಪಿ.ಬಿ ಬಸಪ್ಪ ಹಾಗೂ ಇತರೆ 5 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಎಸ್ಡಿಪಿಐ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯನ್ನು ಭೇಟಿ ಮಾಡಿ ವೃದ್ಧನ ಮೇಲೆ ಹಲ್ಲೆ ನಡೆಸಿ ಊರು ತೊರೆಯುವಂತೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದೆ. ಮಸೀದಿಗೆ ಹಾನಿ ಮಾಡಿ ಗ್ರಾಮದಲ್ಲಿ ಶಾಂತಿ ಭಂಗ ಮಾಡಿದ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಿ, ಊರಿನಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಎಪ್ರಿಲ್ 9 ರಂದು ರಾತ್ರಿ 8:45ರ ಸುಮಾರಿಗೆ ಮಸೀದಿಗೆ ಹೋಗಿ ಮನೆಗೆ ಹಿಂದಿರುಗುವ ದಾರಿಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೇ ಗ್ರಾಮ ತೊರೆಯುವಂತೆ ಬೆದರಿಕೆ ಒಡ್ಡಿದ್ದಾರೆ. ದೇಹದ ಹಲವೆಡೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಘಟನೆ ಬಳಿಕವೂ ಅವರು ಬೆದರಿಕೆ ಒಡ್ಡುತ್ತಿದ್ದು, ಗ್ರಾಮದಲ್ಲಿ ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ಯಾರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ.

-ಹುಸೇನ್ ಸಾಬ್, ಗಾಯಾಳು ವೃದ್ಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News