ರಶ್ಯದೊಂದಿಗಿನ ಕ್ಷಿಪಣಿ ಒಪ್ಪಂದದ ಅಗತ್ಯ ಅಮೆರಿಕಕ್ಕೆ ಮನವರಿಕೆಯಾಗಿದೆ : ನಿರ್ಮಲಾ ಸೀತಾರಾಮನ್

Update: 2019-04-13 17:01 GMT

ಹೊಸದಿಲ್ಲಿ, ಎ.13: ರಶ್ಯದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಭಾರತ ಮಾಡಿಕೊಂಡಿರುವ ಒಪ್ಪಂದದ ಕುರಿತು ಅಮೆರಿಕದ ಆಡಳಿತಕ್ಕೆ ತಿಳಿಸಲಾಗಿದ್ದು ಅಮೆರಿಕ ಇದನ್ನು ಅರ್ಥ ಮಾಡಿಕೊಂಡಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಯ ಒಪ್ಪಂದಕ್ಕೆ ಕಳೆದ ಅಕ್ಟೋಬರ್‌ನಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದರು. ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತದ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸಲಾಗುವುದು ಎಂಬ ಅಮೆರಿಕದ ಅಧ್ಯಕ್ಷರ ಎಚ್ಚರಿಕೆಯ ಹೊರತಾಗಿಯೂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಮೆರಿಕ ಜಾರಿಗೊಳಿಸಿರುವ ಹೊಸ ನಿಯಮದ ಪ್ರಕಾರ, ರಶ್ಯದ ರಕ್ಷಣಾ ಅಥವಾ ಗುಪ್ತಚರ ವಿಭಾಗದ ಜೊತೆ ಒಪ್ಪಂದ ಮಾಡಿಕೊಂಡರೆ ಎರಡನೆ ಹಂತದ ನಿರ್ಬಂಧ ವಿಧಿಸಬಹುದಾಗಿದೆ. ಇದೇ ಕಾರಣಕ್ಕೆ ಟ್ರಂಪ್ ಆಡಳಿತ 2018ರಲ್ಲಿ ಚೀನಾದ ಮೇಲೆ ನಿರ್ಬಂಧ ವಿಧಿಸಿತ್ತು.

  ಚೀನಾ ಮತ್ತು ಪಾಕ್‌ನೊಂದಿಗೆ ಗಡಿ ಹಂಚಿಕೊಂಡಿರುವ ಭಾರತವು ‘ಬಲಿಷ್ಟ ಜತೆಗಾರ’ನಾಗಿರಬೇಕಿದ್ದರೆ ರಶ್ಯದಿಂದ ಶಸ್ತ್ರಾಸ್ತ್ರ ಪಡೆಯುವ ಅಗತ್ಯವಿದೆ ಎಂಬುದು ಅಮೆರಿಕಕ್ಕೆ ಮನವರಿಕೆಯಾಗಿದೆ. ಇದೇ ರೀತಿ ಎಸ್-400 ಕ್ಷಿಪಣಿಯ ವಿಷಯದಲ್ಲೂ ನಾವು ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಾವು ಮುಂದಿರಿಸಿದ ದೃಷ್ಟಿಕೋನವನ್ನು ಅವರು ಶ್ಲಾಘಿಸಿದರು . ಅಮೆರಿಕವು ಭಾರತದ ಮೇಲೆ ನಿರ್ಬಂಧ ವಿಧಿಸದು ಎಂಬ ವಿಶ್ವಾಸವಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು. 2017ರಲ್ಲಿ ಭಾರತ-ಚೀನಾ ಸೇನೆಯ ಮಧ್ಯೆ ಉಂಟಾಗಿದ್ದ ಬಿಕ್ಕಟ್ಟಿನ ಸಮಸ್ಯೆಗೆ ಶಾಂತಿಯುತ ಪರಿಹಾರ ರೂಪಿಸಲು ನಾವು ಮಾಡಿದ ಪ್ರಯತ್ನ, ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಹಾಗೂ ಚೀನಾದ ಅಧ್ಯಕ್ಷರು ವುಹಾನ್‌ನಲ್ಲಿ ಭೇಟಿಯಾಗಿ ನಡೆಸಿದ ಮಾತುಕತೆಯ ಬಳಿಕ ಭಿನ್ನಾಭಿಪ್ರಾಯ ವಿವಾದದ ರೂಪು ಪಡೆಯಲಿಲ್ಲ ಎಂದು ಸಚಿವೆ ಹೇಳಿದರು.

 ಚೀನಾದಲ್ಲಿ ಈ ತಿಂಗಳು ನಡೆಯುವ ‘ವನ್ ಬೆಲ್ಟ್ ವನ್ ರೋಡ್’ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಆಹ್ವಾನವನ್ನು ಭಾರತ ತಿರಸ್ಕರಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಯಯುತವಾಗಿ ನಮಗೆ ಸೇರಬೇಕಿರುವ, ಈಗ ಅಕ್ರಮವಾಗಿ ಪಾಕ್ ವಶದಲ್ಲಿರುವ ಪ್ರದೇಶವು ಚೀನಾ-ಪಾಕಿಸ್ತಾನ ಕಾರಿಡಾರ್ ಯೋಜನೆಯ ವ್ಯಾಪ್ತಿಯಲ್ಲಿರುವುದಕ್ಕೆ ನಮ್ಮ ವಿರೋಧವಿದೆ. ಈ ಯೋಜನೆಯ ಕುರಿತು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News