ಶಿವರಾಮೇಗೌಡರು ಕರ್ಚೀಫ್‍ನಂತೆ ಬಳಕೆಯಾಗುತ್ತಿದ್ದಾರೆ: ಯಶ್

Update: 2019-04-13 17:15 GMT

ಹೆಣ್ಣುಮಕ್ಕಳಿಗೆ ಗೌರವ ಕೊಡಲು ಸಲಹೆ

ಮಂಡ್ಯ, ಎ.13: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಬಿರುಸಿನ ಪ್ರಚಾರ ಮುಂದುವರಿಸಿರುವ ಚಿತ್ರನಟ ಯಶ್, ಶನಿವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಭಾಗದಲ್ಲಿ ರೋಡ್ ಶೋ ನಡೆಸಿದರು.

ಕುಂಟನಹಳ್ಳಿ, ಕೀಳಘಟ್ಟ, ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಹರಳಕೆರೆ, ಬೆಕ್ಕಳಲೆ, ಕೊಪ್ಪ ಇತರೆಡೆ ಪ್ರಚಾರ ನಡೆಸಿದ ಯಶ್, ಮಂಡ್ಯದ ಜನರ ಸ್ವಾಭಿಮಾನವನ್ನು ಗೆಲ್ಲಿಸಬೇಕು. ಇಲ್ಲಿ ಸ್ವಾಭಿಮಾನ ಮಾರಾಟಕ್ಕಿಲ್ಲ. ಕ್ರಮ ಸಂಖ್ಯೆ 20 ಕಹಳೆ ಓದುತ್ತಿರುವ ರೈತನ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಸಂಸದ ಶಿವರಾಮೇಗೌಡ ಅವರು ಹೇಳಿರುವ ಮಾಯಾಂಗಿನಿ ಪದಕ್ಕೆ ಪ್ರತಿಕ್ರಿಯಿಸಿದರು ಅವರು, ಜೆಡಿಎಸ್ ವರಿಷ್ಠರು 6 ತಿಂಗಳುಗಳ ಕಾಲ ಶಿವರಾಮೇಗೌಡರನ್ನು ಕರ್ಚೀಫ್ ಹಾಗೆ ಬಳಸಿಕೊಂಡಿದ್ದರು. ಕರ್ಚಿಪ್ ತೆಗೆದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರಿಗೆ ಆ ಸೀಟು ಕೊಟ್ಟರು. ಕರ್ಚೀಫ್ ನಂತೆ ಬಳಸಿಕೊಳ್ಳುತ್ತಿರುವ ಶಿವರಾಮೇಗೌಡರು ಹೆಚ್ಚು ಮಾತನಾಡಬಾರದು. ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಎಂದು ಸಲಹೆ ನೀಡಿದರು.

ಅಂಬರೀಷ್ ಅವರು ಬದುಕಿದ್ದಾಗ ಶಿವರಾಮೇಗೌಡರು ಅವರ ಕಡೆ ಬೆರಳು ತೋರಿಸಿ ಮಾತನಾಡಲು ಹೆದರುತ್ತಿದ್ದರು. ಈಗ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಪ್ರಕಾರ ಒಂದು ಹೆಣ್ಣು ಮಗಳು, ಮಂಡ್ಯದ ಸೊಸೆ ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸಿದ್ದು ತಪ್ಪೇ? ಕೀಳುಮಟ್ಟದ ಪದಗಳನ್ನು ಬಳಕೆ ಮಾಡಿಕೊಂಡು ಸುಮಲತಾ ಅವರ ವೈಯಕ್ತಿಕ ತೇಜೋವಧೆಗೆ ಮುಂದಾಗುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಸುಮಲತಾ ಅವರಿಗೆ ಯಾರೂ ಇಲ್ಲ ಎಂದುಕೊಂಡಿದ್ದಾರೆ. ನಾವೆಲ್ಲರೂ ಅವರ ಪರವಾಗಿ ಇದ್ದೇವೆ. ಪ್ರಧಾನಿ ನರೇಂದ್ರಮೋದಿ ಅಂಬರೀಷ್ ಅವರ ಹೆಸರನ್ನು ಉಲ್ಲೆಖಿಸಿರುವುದು ಸಂತಸ ತಂದಿದೆ. ಆದರೆ, ಅದಕ್ಕಾಗಿ ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ರೈತ ಸಂಘ ಹಾಗೂ ಪ್ರಗತಿಪರರು ಸುಮಲತಾ ಅವರನ್ನು ಬೆಂಬಲಿಸಿದ್ದಾರೆ. ವಿರೋಧಿಗಳು ಯಾಕೆ ರೈತಸಂಘದ ಅಭ್ಯರ್ಥಿ ಎಂದು ಹೇಳುವುದಿಲ್ಲ? ಬಿಜೆಪಿಯ ಹೆಸರನ್ನು ಬಳಕೆ ಮಾಡಿಕೊಂಡು ಸುಮಲತಾ ಅವರನ್ನು ಸೋಲಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಇದುವರೆಗೂ ನಾವ್ಯಾರೂ ಯಾರ ಬಗ್ಗೆಯೂ ಕೀಳುಮಟ್ಟದಲ್ಲಿ ಮಾತಾಡಿಲ್ಲ. ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಬಗ್ಗೆ ಈ ರೀತಿ ಮಾತನಾಡಿದರೆ ಸಾಮಾನ್ಯರ ಸ್ಥಿತಿಯೇನು. ಮೊದಲು ಮಹಿಳೆಯರನ್ನು ಗೌರವಿಸುವುದನ್ನು ಕಲಿಯಲಿ. ಇಡೀ ಭಾರತವೇ ಮಂಡ್ಯದ ಕಡೆ ತಿರುಗಿ ನೋಡುತ್ತಿದೆ. ಒಂದು ಸರಕಾರದ ವಿರುದ್ಧ ಮಹಿಳೆ ಸ್ಪರ್ಧಿಸಿ ಗೆಲ್ಲುವುದು ಸುಲಭವಲ್ಲ. ಶಾಸಕರು, ಸಚಿವರು ಹಾಗೂ ಸಂಸದ ಹಾಗೂ ಸರಕಾರದ ವಿರುದ್ಧ ಸುಮಲತಾ ಅವರು ಸ್ಪರ್ಧಿಸಿದ್ದಾರೆ. ಮಂಡ್ಯದ ಜನ ಸ್ವಾಭಿಮಾನಕ್ಕೆ ಹೆಸರಾದವರು ಸುಮಲತಾ ಅವರನ್ನು ಎಂದಿಗೂ ಕೈಬಿಡುವುದಿಲ್ಲ. ನಾಲಿಗೆ ಇದೆ ಎಂದು ಹೇಗೆ ಬೇಕೋ ಹಾಗೆ ಹರಿ ಬಿಡುವುದಲ್ಲ. ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ ಎಂದು ಜೆಡಿಎಸ್ ನಾಯಕರಿಗೆ ಯಶ್ ಎಚ್ಚರಿಕೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ವಿವೇಕಾನಂದ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿವಾಕರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News