ಸೈನಿಕರಿಗೆ ಅಪಮಾನ ಮಾಡಿಲ್ಲ: ಸಿಎಂ ಕುಮಾರಸ್ವಾಮಿ

Update: 2019-04-13 17:18 GMT

ಮಂಡ್ಯ, ಎ.13: ನಾನು ಸೈನಿಕರಿಗೆ ಅಪಮಾನ ಮಾಡುವ ಮಾತನಾಡಿಲ್ಲ. ಸೈನಿಕ ಕುಟುಂಬದ ಬಡತನ ನೋಡಿ ಸತ್ಯ ಹೇಳಿದ್ದೇನೆ. ಬಡ ಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿಯೆಂದು ಮೋದಿ ಅವರಿಗೆ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮದ್ದೂರು ತಾಲೂಕಿನ ಬೋರಾಪುರ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉದ್ಯೋಗ ಸೃಷ್ಟಿಯಾಗದೇ ಇರುವುದರಿಂದ ಕನಿಷ್ಠ ಸೈನ್ಯ ಸೇರಿ ಜೀವನ ನಡೆಸುವ ಎಂದು ಬಡ ಮಕ್ಕಳು ಸೈನ್ಯ ಸೇರುತ್ತಾರೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಆ ಹೇಳಿಕೆಯನ್ನು ತಿರುಚಿ ಬಿಜೆಪಿ ಅವರು ಮಾತನಾಡುತ್ತಾರೆ ಎಂದು ಹೇಳಿಕೆ ಸಮರ್ಥಿಸಿಕೊಂಡರು.

ನಾನು ಹುತಾತ್ಮ ಯೋಧ ಗುರು ಕುಟುಂಬದ ಪರಿಸ್ಥಿತಿ ನೋಡಿದ್ದೇನೆ. ಗುರು ಪತ್ನಿಗೆ ನರೇಂದ್ರ ಮೋದಿ ಕೆಲಸಕೊಡಿಸಿದ್ದಾರಾ? ಗುರು ಪತ್ನಿಗೆ ಕೆಲಸ ಕೊಡಿಸಿದ್ದು ನಾನು. ಗುರು ಸೈನ್ಯ ಸೇರಲು ಕಾರಣ ಏನು? ಬಡತನ ಅಲ್ವ? ನಾನು ದೊಡ್ಡ ದೊಡ್ಡ ಕಮಾಂಡೋಗಳ ಬಗ್ಗೆ ಮಾತನಾಡ್ತಿಲ್ಲ. ಗಡಿ ಕಾಯುವ ಸೈನಿಕರ ನೋವು ನನಗೆ ಗೊತ್ತಿರುವುದರಿಂದ ಆ ಮಾತು ಹೇಳಿದ್ದೇನೆ ಎಂದು ಅವರು ತಿರುಗೇಟು ನೀಡಿದರು.

ನಂತರ ಕೆ.ಎಂ.ದೊಡ್ಡಿಯಲ್ಲಿ ಪುತ್ರ ನಿಖಿಲ್ ಪರವಾಗಿ ನಡೆದ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಆರೋಗ್ಯ ಹದಗೆಟ್ಟಿದ್ದರಿಂದ ನಿಖಿಲ್‍ನನ್ನು ರಾಜಕೀಯಕ್ಕೆ ಕರೆತರಲಾಯಿತು. ನಾನು ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ನನಗೆ ಎರಡು ಮೇಜರ್ ಆಷರೇಷನ್ ಆಗಿದ್ದು, ನಿಖಿಲ್‍ರನ್ನು ಮಂಡ್ಯದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ರಾಜಕೀಯ ಪ್ರವೇಶ ಮಾಡಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ನನ್ನ ಬಜೆಟ್ ಮಂಡ್ಯ ಬಜೆಟ್ ಎಂದು ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಇಂದು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ನಾವು ಮಂಡ್ಯ ಅಭಿವೃದ್ದಿ ಮಾಡುತ್ತೇವೋ ಅಥವಾ ಅವರು ಮಾಡುತ್ತಾರೋ ಮತದಾರರು ಯೋಚನೆ ಮಾಡಬೇಕಿದೆ ಎಂದು ಮನವಿ ಮಾಡಿದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲುವಿಗಾಗಿ  ಕೆ.ಎಂ.ದೊಡ್ಡಿ ಸುತ್ತ-ಮುತ್ತಲಿನ ಗ್ರಾಮದ ರೈತರು 3 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದರು.

ನಾನ್ಯಾಕೆ ಸನ್ಯಾಸಿಯಾಗಲಿ: ದೇವೇಗೌಡ

ಎಚ್.ಡಿ.ದೇವೇಗೌಡ ಮಾತನಾಡಿ, ನಾನ್ಯಾಕೆ ಸನ್ಯಾಸಿ ಆಗಲಿ. ನನ್ನ ಕೊನೆ ಉಸಿರು ಇರುವರೆಗೂ ರೈತರಿಗಾಗಿ ಹೋರಾಟ ನಡೆಸುತ್ತೇನೆ. ತುಮಕೂರಿನಿಂದ ಗೆಲ್ಲುವುದು ಶತಸಿದ್ದ ಎಂದು ನರೇಂದ್ರ ಮೋದಿಗೆ ಸವಾಲು ಹಾಕಿದರು.

ಪಾರ್ಲಿಮೆಂಟ್‍ನಲ್ಲಿ ಮೋದಿ ಪ್ರಧಾನಿ ಆಗ್ತಾರೋ ಇಲ್ವೋ. ಆದರೆ, ನಾನು ಮಾತ್ರ ಹೋರಾಟ ಮಾಡುತ್ತೇನೆ. ಒಬ್ಬ ರೈತನ ಮಗ ಏನು ಅಂತ ತೋರಿಸುತ್ತೇನೆ ನೋಡಿ ಎಂದು ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News