ನಿಖಿಲ್ ಪರ ದೇವೇಗೌಡ, ಕುಮಾರಸ್ವಾಮಿ ರೋಡ್ ಶೋ

Update: 2019-04-13 17:22 GMT

ಮಂಡ್ಯ, ಎ.13: ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಸಿಎಂ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮದ್ದೂರು ವಿಧಾನಸಭಾ ಕ್ಷೇತ್ರದ ಕೆ.ಹೊನ್ನಲಗೆರೆ, ಕೆ.ಎಂ.ದೊಡ್ಡಿ ಭಾಗದಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿದರು.

ತೆರೆದ ಬಸ್‍ನಲ್ಲಿ ದೇವೇಗೌಡ, ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕಿ ಪಟಾಕಿ ಸಿಡಿಸಿ ಜಯಘೋಷ ಹಾಕಿ ಸಂಭ್ರಮಿಸಿದರು. ಸಚಿವ ಡಿ.ಸಿ.ತಮ್ಮಣ್ಣ ಸಾಥ್ ನೀಡಿದರು.

ದೇವೇಗೌಡರು ಮಾತನಾಡಿ, ಅಂಬರೀಷ್ ಮಾಡಿರುವ ಅರ್ಧ ಕೆಲಸವನ್ನು ನಾವು ಪೂರ್ಣಗೊಳಿಸಲು ಬಂದಿರುವುದಾಗಿ ಹೇಳುತ್ತಿದ್ದಾರೆ. ಯಾವ ಕೆಲಸ, ಏನು ಕೆಲಸ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ತಿರುಗೇಟು ನೀಡಿದರು.

ಕನ್ನಂಬಾಡಿ ಕಟ್ಟೆಯನ್ನು ವಿಶ್ವೇಶ್ವರಯ್ಯ ಕಟ್ಟಿದ್ದಾರೆ. ಆದರೆ, ಕೇಂದ್ರ ಸರಕಾರದವರು ಏನು ಮಾಡಿದ್ದಾರೆ. ನಮ್ಮ ರೈತರು ಎರಡು ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಇದ್ದಾಗ ಉಗ್ರ ಹೋರಾಟ ಮಾಡಿದ್ದೇವೆ. ನಾವು ಮಾಡಿದ ಹೋರಾಟ ರೈತರಿಗಾಗಿ ಅಲ್ಲವೆ? ಕಾವೇರಿ ನೀರಿಗಾಗಿ 25 ವರ್ಷಗಳ ಕಾಲ ಹೋರಾಟ ಮಾಡಿದ್ದು ದೇವೇಗೌಡರು ಎಂಬುದು ಜನರಿಗೆ ಗೊತ್ತಿದೆ. ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಸಚಿವ ಅಂಬರೀಷ್ ಅವರಿಗೆ ವರನಟ ಡಾ.ರಾಜ್‍ಕುಮಾರ್‍ಗಿಂತಲೂ ಹೆಚ್ಚಿನ ಗೌರವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟಿರುವುದು ನೆನಪಿಲ್ಲವೇ ಎಂದ ಅವರು, ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ಲಿಸುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಮೈಷುಗರ್ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮಂಡ್ಯ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಚುನಾವಣೆಯಲ್ಲಿ ನಿಖಿಲ್ ಗೆಲ್ಲಿಸುವ ಮೂಲಕ ದೇವೇಗೌಡರ ಕೈ ಬಲಪಡಿಸಬೇಕೆಂದು  ಕೋರಿದರು.

ವಿಶ್ವೇಶ್ವರಯ್ಯ ನಾಲೆಯಲ್ಲಿ 2ನೇ ಬೆಳೆ ಬೆಳೆಯಲು ನೀರು ಬಿಟ್ಟಿರುವುದಾಗಿ ಹೇಳಿದ್ದಕ್ಕೆ ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ. ಅಂಥ ದೂರುಗಳಿಗೆ ಹೆದರುವುದಿಲ್ಲ. ಜಿಲ್ಲೆಯ ರೈತರ ಹಿತ ಮುಖ್ಯ. ಮದ್ದೂರು ಭಾಗದ ಕೆರೆಕಟ್ಟೆ ತುಂಬಿಸಲು ನಾವು ಬದ್ಧರಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News