ನಿಖಿಲ್ ವಿರೋಧಿ ಅಲೆ ಎಂಬುದು ಮಾಧ್ಯಮಗಳ ಸೃಷ್ಟಿ: ಜೆಡಿಎಸ್ ಮುಖಂಡ ಸುರೇಶ್

Update: 2019-04-13 17:24 GMT

ಮಂಡ್ಯ, ಎ.13: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರೋಧಿ ಅಲೆ ಇದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು ಜಿಲ್ಲೆಯಲ್ಲಿ ನಿಖಿಲ್ ಅವರ ಗೆಲುವಿಗೆ ಪೂರಕ ವಾತಾವರಣ ಇದೆ ಎಂದು ಮಂಡ್ಯ ಜೆಡಿಎಸ್ ಮುಖಂಡ ಸುರೇಶ್ ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸಮೀಕ್ಷೆಗಳು ಜನಾಭಿಪ್ರಾಯದ ವಿರುದ್ಧದ ಸಮೀಕ್ಷೆಗಳಾಗಿವೆ. ಏಕ ವ್ಯಕ್ತಿಗಳ ಅಭಿಪ್ರಾಯವನ್ನು ಇಡೀ ಜಿಲ್ಲೆಯ ಅಭಿಪ್ರಾಯಗಳಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಮಾಧ್ಯಮಗಳ ಈ ವರ್ತನೆ ಖಂಡನೀಯವಾಗಿದ್ದು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಲು ಮಂಡ್ಯದ ಜನರು ಉತ್ಸಹಕರಾಗಿದ್ದಾರೆ ಎಂದು ಹೇಳಿದರು. 

ಮಾಧ್ಯಮಗಳೇ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಸೋಲಿಸುವುದಾದರೆ ಪ್ರಜೆಗಳಿಗೆ ಮತದಾನದ ಹಕ್ಕು ಯಾಕೆ ಇರುವುದು. ಪ್ರಜೆಗಳು ನಮ್ಮ ಹಕ್ಕನ್ನು ಯಾಕೆ ಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯೋಗ್ಯ ಅಭ್ಯರ್ಥಿ ಇರುತ್ತಾರೋ ಅವರಿಗೆ ಜನರು ಮತ ಚಲಾಯಿಸುತ್ತಾರೆ. ರೈತರ ಆತ್ಮಹತ್ಯೆ, ಸಂಕಷ್ಟಗಳನ್ನು ಸುದ್ಧಿ ಮಾಡಲು ಸಾಧ್ಯವಾಗದ ಮಾಧ್ಯಗಳು ಇಡೀ ದೇಶದಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಭಿಸಿ ಏಕಾಭಿಪ್ರಾಯವನ್ನು ಬಿತ್ತರಿಸಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ನಟ ದಿ. ಅಂಬರೀಷ್ ಅವರ ಪತ್ನಿ ಸುಮಲತಾ ಕೂಡಾ ಸ್ಪರ್ಧಾ ಕಣದಲ್ಲಿ ಇದ್ದಾರೆ. ಮಂಡ್ಯ ಉಸ್ತುವಾರಿ ಸಚಿವರಾಗಿ, ಮಂಡ್ಯ ಶಾಸಕರಾಗಿ ಅಂಬರೀಷ್ ಎಷ್ಟು ದಿನ ಕ್ಷೇತ್ರದಲ್ಲಿ ಇದ್ದರು. ಮಂಡ್ಯದ ಸಮಸ್ಯೆಯ ಬಗ್ಗೆ ಹೇಳಲು ವಿಧಾನಸಭೆಗೆ ಎಷ್ಟು ಬಾರಿ ಹೋಗಿದ್ದಾರೆ. ತನ್ನ ಅವಧಿಯಲ್ಲಿ ಅಂಬರೀಷ್ ಅವರು ಮಂಡ್ಯ ಜಿಲ್ಲಾ ಪಂಚಾಯತ್ ಸಭೆಗೆ ಒಮ್ಮೆಗೂ ಬಂದಿಲ್ಲ. ಈಗ ಮಂಡ್ಯದ ಸ್ವಾಭಿಮಾನ ಬೇಕು. ಮಂಡ್ಯದ ಸೊಸೆ ಬೇಕು ಎಂದರೆ ಹೇಗೆ. ಅಂಬರೀಷ್ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಮತ ಚಲಾಯಿಸಲು ಬಾರದ ಸುಮಲತಾ ಅವರು ಈಗ ಬಂದು ನಾನು ಮಂಡ್ಯದ ಸೊಸೆ, ಮಂಡ್ಯದ ಜನರು ಸ್ವಾಭಿಮಾನಿಗಳು ಎನ್ನುತ್ತಿದ್ದಾರೆ ಎಂದು ನುಡಿದರು.  

ನಿಖಿಲ್ ಕುಮಾರಸ್ವಾಮಿಗೆ ಸಂಸದರಾಗುವ ಅರ್ಹತೆ ಏನಿದೆ ಎಂದು ಪ್ರಶ್ನಿಸುವವರು, ಸುಮಲತಾ ಅವರಿಗೆ ಇರುವ ಯೋಗ್ಯತೆ ಏನು ಎಂಬುದನ್ನು ಮೊದಲು ಹೇಳಲಿ. ಸುಮಲತಾ ಅವರು ಎಷ್ಟು ರಾಜಕಾರಣ ಮಾಡಿದ್ದಾರೆ. ಎಷ್ಟು ಜನರಿಗೆ ಓಟು ಹಾಕಿದ್ದಾರೆ. ನಿಖಲ್ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಗರಡಿಯಲ್ಲಿ ಬೆಳೆದವರು. ಸುಮಲತಾ ಅವರು ಅಂಬರೀಷ್ ಗರಡಿಯಲ್ಲಿ ಕೂಡಾ ಬೆಳೆದಿಲ್ಲ. ಮಂಡ್ಯದಲ್ಲಿ ಗಿಮಿಕ್ ರಾಜಕಾರಣ ನಡೆಯಲ್ಲ. ಯಾರು ಕೆಲಸ ಮಾಡುತ್ತಾರೋ ಅಂತವರನ್ನು ಮಂಡ್ಯದ ಜನರು ಬೆಂಬಲಿಸುತ್ತಾರೆ. ಇಲ್ಲಿ ವ್ಯಕ್ತಿ ನಿಷ್ಠೆ ಇಲ್ಲ. ದುಡಿಯುವ ವ್ಯಕ್ತಿಗೆ ಅವಕಾಶ ಮಾಡಿ ಕೊಡುತ್ತಾರೆ ಎಂದರು.  

ಕೆಲವರು ನಿಖಿಲ್ ಹೊರಗಿನವರು ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ರಾಹುಲ್ ಗಾಂಧಿ ಕೇರಳದ ವಯನಾಡಿನವರೇ? ಅವರು ಅಲ್ಲಿ ಸ್ಪರ್ಧಿಸುತ್ತಿಲ್ಲವೇ? ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿಲ್ಲವೇ? ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಬೇಕು ಹೊರೆತು ಯಾವ ಕ್ಷೇತ್ರ ಎಂಬುದು ಅಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ನಿಖಿಲ್ ಕುಮಾರಸ್ವಾಮಿಗೆ ಇದೆ. ದೇವೇಗೌಡರದ್ದು ಕುಟುಂಬ ರಾಜಕೀಯ ಎಂದು ಮೂದಲಿಸುತ್ತಿರುವ ಪಕ್ಷದವರೇ ಈ ದೇಶಕ್ಕೆ ಕುಟುಂಬ ರಾಜಕೀಯವನ್ನು ಕಲಿಸಿಕೊಟ್ಟವರು ಎಂದು ಅವರು ಹೇಳಿದರು. 

ಮಂಡ್ಯ ಜಿಲ್ಲೆ ಪ್ರಗತಿ ಕಾಣಬೇಕಾಗಿದೆ. ಹೆಚ್ಚಿನ ಅನುದಾನವನ್ನು ಕುಮಾರಸ್ವಾಮಿ ಜಿಲ್ಲೆಗೆ ಘೋಷಣೆ ಮಾಡಿದ್ದಾರೆ. ಹಾಸನ ಜಿಲ್ಲೆಯ ಮಾದರಿಯಲ್ಲಿ ಮಂಡ್ಯವನ್ನು ಕೂಡಾ ಅಭಿವೃದ್ಧಿ ಮಾಡುವ ಕನಸು ಕುಮಾರಸ್ವಾಮಿಯದ್ದಾಗಿದೆ. ಸ್ಥಳೀಯ ಕಾರ್ಯಕರ್ತರು ಹಾಗೂ ಜಿಲ್ಲೆಯ ಎಂಟು ಶಾಸಕರ ನಿರ್ಧಾರದಂತೆ ನಿಖಿಲ್ ಅವರನ್ನು ಮಂಡ್ಯದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗಿದೆ ಹೊರತು ದೇವೇಗೌಡ ಕುಟುಂಬದ ನಿರ್ಧಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.  

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚಿವೆ. ಅದಕ್ಕಾಗಿ ಹೊಸ ಸಕ್ಕರೆ ಕಾರ್ಖಾನೆ ತೆರೆಯಲು ಕುಮಾರಸ್ವಾಮಿ 400 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಜಿಲ್ಲೆಗೆ ಕುಮಾರಸ್ವಾಮಿ ನೀಡಿದ ಕೊಡುಗೆಯನ್ನು ನೋಡಿ ಕುಮಾರಸ್ವಾಮಿ ಮಂಡಿಸಿದ್ದು ಮಂಡ್ಯ ಬಜೆಟ್ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ. ಇನ್ನು ಹೆಚ್ಚಿನ ಅನುದಾನ ಜಿಲ್ಲೆಗೆ ಬರಬೇಕಾದರೆ ನಿಖಿಲ್ ಅವರು ಗೆಲ್ಲಲೇ ಬೇಕಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.  

ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದಾರೆ. ವಿಧವೆಯರಿಗೆ ನೀಡುತ್ತಿದ್ದ ಮಾಸಾಸನವನ್ನು ಐನೂರು ರೂ.ನಿಂದ ಒಂದು ಸಾವಿರಕ್ಕೆ ಏರಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಟೀಕೆ ಟಿಪ್ಪಣಿ ಸಹಜ. ಆದರೆ ಸೋಲು ಗೆಲುವನ್ನು ಜನರು ನಿಧರಿಸುತ್ತಾರೆ. ಮಾಧ್ಯಮಗಳು ಬಿಂಬಿಸಿದಂತೆ ಮೈತ್ರಿ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಎಲ್ಲೊ ಒಂದು ಕಡೆ ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಅದು ಎಲ್ಲ ಪಕ್ಷಗಳಲ್ಲಿ ಇರುತ್ತದೆ. ಸ್ವಂತ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತದೆ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿಯಾಗಿದೆ. ಚೆಲುವರಾಯಸ್ವಾಮಿ ಮತ್ತು ಬಾಬು ಅವರಿಗೆ ಸ್ವಲ್ಪ ವೈಮನಸ್ಸು ಇತ್ತು. ಇಂದು ರಾಹುಲ್ ಗಾಂಧಿ ಬಂದು ಅವೆಲ್ಲವನ್ನು ಸರಿ ಮಾಡಿದ್ದಾರೆ ಎಂದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News