ವಿಜಯಶಂಕರ್ ಗೆಲ್ಲಿಸುವ ಮೂಲಕ ನನ್ನ ಹೋರಾಟ ಸಾಬೀತುಪಡಿಸುತ್ತೇನೆ: ಹೆಚ್.ಡಿ.ದೇವೇಗೌಡ

Update: 2019-04-13 17:58 GMT

ತುಮಕೂರು, ಎ.13: 60 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯವನ್ನು ಮಾಡದೇ, ಎಲ್ಲ ಜಾತಿ, ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಿದ್ದೇನೆ. ಸಿದ್ದರಾಮಯ್ಯ ಅವರು ಅದನ್ನೇ ಹೇಳಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದ ಗ್ರಂಥಾಲಯ ಆವರಣದಲ್ಲಿ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಅಭ್ಯರ್ಥಿಯಾಗಿರುವ ವಿಜಯಶಂಕರ್ ಅವರ ಕೈಬಿಡುವುದಿಲ್ಲ, ಹೋರಾಡಿ ಅವರ ಗೆಲುವಿಗೆ ಬೆನ್ನುಲುಬಾಗಿ ನಿಲ್ಲುತ್ತೇನೆ. ರಾಹುಲ್ ಗಾಂಧಿ ನನ್ನನ್ನು ಪರೀಕ್ಷಿಸುತ್ತಿದ್ದಾರೆ. ವಿಜಯಶಂಕರ್ ಗೆಲ್ಲಿಸುವ ಮೂಲಕ ನನ್ನ ಹೋರಾಟವನ್ನು ಸಾಬೀತು ಪಡಿಸುತ್ತೇನೆ ಎಂದರು.

ಮೈತ್ರಿ ಸರ್ಕಾರ ರಚನೆಯಾದ ನಂತರ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ ವಿಧಿಯಾಟ ನನ್ನನ್ನು ಕರೆದು ಕೊಂಡು ಬಂದು ತುಮಕೂರಿನಲ್ಲಿ ನಿಲ್ಲಿಸಿದೆ. ಎಲ್ಲ ಸಮಾಜದವರಿಗೂ ಮೀಸಲಾತಿ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯವನ್ನು ದೊರಕಿಸಿದೆ. ಸಣ್ಣಸಣ್ಣ ಜಾತಿಯವರು ಜಿ.ಪಂ.ಸದಸ್ಯರಾಗಲು ಗ್ರಾ.ಪಂ.ಅಧ್ಯಕ್ಷರಾಗಲು ನಾನು ನೀಡಿದ ಮೀಸಲಾತಿ ಕಾರಣ. ಆದರೆ ಇಂದು ನನ್ನ ವಿರುದ್ಧವೇ ಜಾತಿಯನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ವಿಧಿಯಾಟದಂತೆ ತುಮಕೂರಿಗೆ ಬಂದು ನಿಂತಿದ್ದೇನೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ಹೋರಾಡುತ್ತೇನೆ. ಚಿಕ್ಕನಾಯಕನಹಳ್ಳಿಯಲ್ಲಿ ಗೊಲ್ಲ ಸಮುದಾಯದ ನಮ್ಮ ಕಾರ್ಯಕರ್ತರಿಗೆ ಶಾಸಕರೇ ಹೊಡೆದಿದ್ದಾರೆ. ಇಂತಹ ರಾಜಕಾರಣವನ್ನು ಬಿಡದೇ ಇದ್ದರೆ ಕಾರ್ಯಕರ್ತರೊಂದಿಗೆ ಹೋರಾಡುತ್ತೇನೆ. ವಿರೋಧ ಪಕ್ಷಗಳು ಮಾಡುವ ಅಪಪ್ರಚಾರಕ್ಕೆ ಕಿವಿಕೊಡದೇ ಮತ ನೀಡುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮಾತನಾಡಿ, ದೇವರಾಜ ಅರಸು ಅವರ ದಾರಿಯಲ್ಲಿಯೇ ದೇವೇಗೌಡರು ಸಾಗುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ನೂರಾರು ನಾಯಕರನ್ನು ಬೆಳೆಸಿದ್ದಾರೆ. ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಲು ದೇವೇಗೌಡರು ಕಾರಣ ಎನ್ನುವುದನ್ನು ಮರೆಯಬಾರದು. ಹಾಗೆಯೇ ಕುರುಬ ಸಮಾಜದ ಬೆಳವಣಿಗೆಗೆ, ನಾಯಕತ್ವ ಬೆಳವಣಿಗೆಗೆ ದೇವೇಗೌಡರು ಕಾರಣ ಎನ್ನುವುದನ್ನು ಕುರುಬ ಸಮಾಜ ಮರೆಯಬಾರದು ಎಂದರು.

ಸಿದ್ದರಾಮಯ್ಯ ಅವರು ನಮ್ಮ ಸಮಾಜದ ನಾಯಕರಾಗಲು ದೇವೇಗೌಡರು ನೀಡಿದ ಸಹಕಾರವೇ ಕಾರಣ. ರಾಜಕಾರಣದಿಂದ ದೂರ ಉಳಿದಿದ್ದ ನನ್ನನ್ನು ಕರೆತಂದು ಶಾಸಕನನ್ನಾಗಿಸಿ, ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಿ ರಾಜಕೀಯ ಪುರ್ನಜನ್ಮವನ್ನು ನೀಡಿದ್ದಾರೆ. ಭಾರತದ ರಾಜಕಾರಣ ಹರಿಯುವ ನೀರಿನಂತೆ ಬದಲಾಗುತ್ತಲೇ ಇರುತ್ತದೆ. ದೇವೇಗೌಡ-ಸಿದ್ದರಾಮಯ್ಯ ಇಬ್ಬರು ಒಂದಾಗಿ ಕೋಮುವಾದಿಗಳ ವಿರುದ್ಧ ಹೋರಾಡುತ್ತಿದ್ದು, ಅವರ ಕೈ ಬಲಪಡಿಸಬೇಕು ಎಂದು ಅವರು ಹೇಳಿದರು.

ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದವನು ನಾನು ಎಂದು ಸುಳ್ಳು ಹೇಳುವ ಪ್ರಧಾನಿ ಮೋದಿ, ನೆಹರು, ಇಂದಿರಾಗಾಂಧಿ, ಶಾಸ್ತ್ರಿ ಅವರ ಕೊಡುಗೆಗಳನ್ನು ಕಡೆಗಣಿಸಿ ಮಾತನಾಡುತ್ತಿದ್ದಾರೆ. ಸಬ್‍ಕಾಸಾಥ್ ಸಬ್‍ಕಾ ವಿಕಾಸ್ ಎನ್ನುವ ಅವರು ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ದೂರವಿಟ್ಟು ಚುನಾವಣೆ ನಡೆಸುತ್ತಿದ್ದಾರೆ. ಇದು ಅವರ ದ್ವಿಮುಖ ನೀತಿಗೆ ಸಾಕ್ಷಿ ಎಂದ ಅವರು, ರಫೇಲ್ ಡೀಲ್ ಹಗರಣದಲ್ಲಿ ತನಿಖೆ ನಡೆಸಲು ಸುಪ್ರೀಂ ಆದೇಶ ನೀಡಿದೆ. ವಿಮಾನ ನೀಡಿದ ದೇಶವು ತನಿಖೆಗೆ ಮುಂದಾಗಿದ್ದು, ಮೋದಿ ಶೀಘ್ರ ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಪ್ರೊ.ರವಿವರ್ಮ ಕುಮಾರ್ ಮಾತನಾಡಿ ದೇಶದಲ್ಲಿ ಶೇ.95 ರಷ್ಟಿರುವ ಎಲ್ಲ ಜಾತಿಗಳಿಗೆ ಶೇ.50 ರಷ್ಟು ಮೀಸಲಾತಿಯನ್ನು ನೀಡಿದ್ದು, ಶೇ.5ರಷ್ಟು ಇರುವ ಸಮುದಾಯಕ್ಕೆ ಮೋದಿ ಯಾವುದೇ ಹೋರಾಟವಿಲ್ಲದೆ ಶೇ.10ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಚಮತ್ಕಾರವನ್ನು ಮಾಡಿದ್ದಾರೆ. ಮೋದಿ ಅವರ ಸರ್ವಾಧಿಕಾರಿ ಧೋರಣೆಯಿಂದ ಸಾಮಾಜಿಕ ನ್ಯಾಯಕ್ಕೆ ವಿರೋಧವಾದ ಕೆಲಸ ಮಾಡಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಮೋದಿ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದರು.

ಪ್ರಗತಿಪರ ಚಿಂತಕ ದೊರೈರಾಜು ಮಾತನಾಡಿ  ಕಳೆದ ಐದು ವರ್ಷಗಳಿಂದ ಸಮಾಜದಲ್ಲಿ ನೆಮ್ಮದಿ ಸಾಮರಸ್ಯ ಹಾಳಾಗಿದ್ದು, ನಿರುದ್ಯೋಗ ಕಾಡುತ್ತಿದ್ದು, ಜಾತಿ ಧರ್ಮದ ಸಂಘರ್ಷ, ದುರ್ಬಲರ ಮೇಲೆ ದೌರ್ಜನ್ಯದಿಂದ ಬಹುತ್ವದ ಭಾರತ ಮರೆಯಾಗುತ್ತಿದ್ದು, ಬಹುತ್ವದ ಭಾರತವನ್ನು ಉಳಿಸಿಕೊಳ್ಳಲು ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದ್ದು, ದೇವೇಗೌಡರು ಇಲ್ಲಿಂದ ಗೆಲುವು ಸಾಧಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾಜಿ ಶಾಸಕ ಡಾ.ರಫೀಕ್ ಅಹ್ಮದ್, ನಿಕೇತ್ ರಾಜ್ ಮಾತನಾಡಿದರು. ಸಭೆಯಲ್ಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಸುರೇಶ್‍ ಬಾಬು, ಡಿಸಿಸಿ ಅಧ್ಯಕ್ಷ ಆರ್.ರಾಮಕೃಷ್ಣ, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ಮೇಯರ್ ಲಲಿತಾರವೀಶ್, ಮುಖಂಡರಾದ ಗೋವಿಂದರಾಜು, ಮಾಜಿ ಟೂಡ ಅಧ್ಯಕ್ಷ ಶಿವಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News