ಮತದಾರರಲ್ಲಿ ಜಾಗೃತಿ ಮೂಡಿಸಲು ‘ಪ್ಯಾರಾಗ್ಲೈಡಿಂಗ್’ ಕಾರ್ಯಕ್ರಮ

Update: 2019-04-13 18:36 GMT

ಧಾರವಾಡ, ಎ.13: ಧಾರವಾಡದ ಕರ್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸದಿಂದ ಇಳಿದು ಬಂದ ಮತದಾನ ಸಂದೇಶದ ಕರಪತ್ರಗಳು, ಧಾರವಾಡ ನಾಗರಿಕರಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದವು.

ಜಿಲ್ಲಾ ಸ್ವೀಪ್ ಸಮಿತಿಯು ಮತದಾರರ ಜಾಗೃತಿಗಾಗಿ ಏರ್ಪಡಿಸಿದ್ದ ಪ್ಯಾರಾಗ್ಲೈಡಿಂಗ್ ಕಾರ್ಯಕ್ರಮ ಶನಿವಾರ ಬೆಳಗ್ಗೆ ಕೆಸಿಡಿ ಆವರಣದಿಂದ ಆರಂಭವಾಯಿತು.

ಬೆಂಗಳೂರಿನ ಏವಿಯೇಷನ್ ಮತ್ತು ಸ್ಪೋರ್ಟ್ಸ್ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್, ಪ್ಯಾರಾಗ್ಲೈಡಿಂಗ್‌ನಲ್ಲಿ ಬಾನಂಗಳಕ್ಕೆ ಹಾರಿ, ಮತದಾರರ ಜಾಗೃತಿ ಸಂದೇಶ ಹರಡಿದರು.

ಪ್ಯಾರಾಗ್ಲೈಡಿಂಗ್ ಬೃಹತ್ ಪರದೆಯು ಮೇಲಕ್ಕೆ ಹಾರುತ್ತಲೇ ಸಂಪೂರ್ಣವಾಗಿ ಬಿಚ್ಚಿಕೊಂಡಿತು, ಅದರ ಹಿನ್ನೆಲೆಯಲ್ಲಿ ಕಟ್ಟಲಾಗಿದ್ದ ಮತದಾರರ ಜಾಗೃತಿ ಸಂದೇಶ ಅನಾವರಣಗೊಂಡು ಮೈದಾನದಲ್ಲಿ ಬೆಳಗಿನ ವಾಯುವಿಹಾರಕ್ಕೆ ನೆರೆದಿದ್ದ ಜನರನ್ನು ಆರ್ಕಷಿಸಿತು.

ಪ್ಯಾರಾಗ್ಲೈಡಿಂಗ್ ವಾಯು ವಾಹನವು ಕೆಲಗೇರಿ, ಸಂಪಿಗೆ ನಗರ, ಶ್ರೀನಗರ, ಸಪ್ತಾಪೂರ ಸುತ್ತಮುತ್ತಲಿನ ಪರಿಸರದಲ್ಲಿ ಹಾರಾಡಿತು. ವಾಯು ವಿಹಾರಕ್ಕೆ ಬಂದಿದ್ದ ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಸಂತಸದಿಂದ ಪ್ಯಾರಾಗ್ಲೈಡಿಂಗ್ ವಾಹನದೊಂದಿಗೆ ಸೆಲ್ಫಿ ತೆಗೆದುಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹುಡೇದಮನಿ, ನಿವೃತ್ತ ಡಿಸಿಎಫ್ ಶಂಕರ್ ಸಾಧನಿ, ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಶ್ವನಾಥ್, ಸ್ವೀಪ್ ಸಮಿತಿಯ ಕೆ.ಎಂ.ಶೇಖ್, ಜಿ.ಎನ್.ನಂದನ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News