ಭಾರತದ ವಿಶ್ವಕಪ್ ತಂಡದಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ ?

Update: 2019-04-14 04:10 GMT

ಚೆನ್ನೈ, ಎ. 14: ಮುಂಬರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 15 ಮಂದಿಯ ಭಾರತ ಕ್ರಿಕೆಟ್ ತಂಡವನ್ನು ಅಂತಿಮ ಪಡಿಸಲು ಸೋಮವಾರ ಮುಂಬೈನಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಆದರೆ ತಂಡಕ್ಕೆ ಆಯ್ಕೆಯಾಗುವ 15 ಮಂದಿಯ ಪೈಕಿ 14 ಹೆಸರುಗಳ ಬಗ್ಗೆ ಖಚಿತ ಮಾಹಿತಿ ದೊರಕಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ತಂಡದಲ್ಲಿರುವ ನಾಲ್ಕು ಹೊಸಮುಖಗಳ ಪೈಕಿ ಒಬ್ಬರು.

ವಿರಾಟ್ ಕೊಹ್ಲಿ ನೇತೃತ್ವದ ತಂಡದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಕೇದಾರ್ ಜಾಧವ್, ಕೆ.ಎಲ್. ರಾಹುಲ್, ವಿಜಯ ಶಂಕರ್ ಹಾಗೂ ಪಂತ್ ಇದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಏಕದಿನ ಕ್ರಿಕೆಟ್‌ನಲ್ಲಿ ಸೀಮಿತ ಅನುಭವ ಇರುವ ಪಂತ್ ಆಯ್ಕೆ ಹಲವರ ಹುಬ್ಬೇರಿಸಿದೆ. ಅಗತ್ಯ ಬಿದ್ದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಸಲುವಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ದಿನೇಶ್ ಕಾರ್ತಿಕ್ ಮೇಲೆ ಕಳೆದ 18 ತಿಂಗಳಿಂದ ಆಯ್ಕೆ ಸಮಿತಿ ವಿಶ್ವಾಸ ಇರಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸರಣಿಗೆ ಅವರನ್ನು ಕೈಬಿಡಲಾಗಿತ್ತು. ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಪಂತ್ ಅವರಿಗಿದೆ ಎಂಬ ತೀರ್ಮಾನಕ್ಕೆ ಬಂದಿರುವ ಆಯ್ಕೆ ಸಮಿತಿ ಅವರನ್ನು ಅಂತಿಮ ತಂಡದಲ್ಲಿ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿಜಯ್‌ಶಂಕರ್ ಕೂಡಾ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಮತ್ತು ಮನೀಶ್ ಪಾಂಡೆ ಬದಲು ಕೇದಾರ್ ಜಾಧವ್ ಉತ್ತಮ ಆಯ್ಕೆ ಎನಿಸಿದ್ದಾರೆ. ಮೂರನೇ ಆರಂಭಿಕನಾಗಿ ಕೆ.ಎಲ್.ರಾಹುಲ್ ತಂಡಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ಮೂರನೇ ಕ್ರಮಾಂಕದಲ್ಲಿ ಕೂಡಾ ಬಳಸಿಕೊಳ್ಳಬಹುದು ಎನ್ನುವುದು ಆಯ್ಕೆ ಸಮಿತಿಯ ಲೆಕ್ಕಾಚಾರ. ಮೂವರು ಸ್ಪಿನ್ನರ್‌ಗಳನ್ನು ಇಂಗ್ಲೆಂಡಿನಲ್ಲಿ ಆಡಿಸುವುದು ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News