ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸದೇ ರಹಸ್ಯ ಕಾಯ್ದುಕೊಂಡ ಕಾಂಗ್ರೆಸ್

Update: 2019-04-14 06:53 GMT

ಹೊಸದಿಲ್ಲಿ, ಎ.14: ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದಿಂದ ಸ್ಪರ್ಧಿಸುವ 9 ಅಭ್ಯರ್ಥಿಗಳ ಹೆಸರುಗಳನ್ನು ಶನಿವಾರ ಪ್ರಕಟಿಸಿದ್ದು, ಗಾಂಧಿ ಕುಟುಂಬ ಕುಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ರಹಸ್ಯ ಕಾಯ್ದುಕೊಂಡಿದೆ.

ಕಾಂಗ್ರೆಸ್ ವಾರಣಾಸಿ ಕ್ಷೇತ್ರವಲ್ಲದೆ ಲಕ್ನೋ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಲಕ್ನೋ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ರಾಜನಾಥ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ.

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವ ಬಾಲಿವುಡ್ ಸ್ಟಾರ್ ಹಾಗೂ ಮಾಜಿ ಬಿಜೆಪಿ ಸಂಸದ ಶತುೃಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಕಾಂಗ್ರೆಸ್ ಟಿಕೆಟ್‌ನಲ್ಲಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಅಥವಾ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಲಕ್ನೋದಿಂದ ಸ್ಪರ್ಧಿಸುವ ಸಾಧ್ಯತೆಯೂ ಇದೆ.

  ಕಾಂಗ್ರೆಸ್ ಮೋಹನ್‌ಲಾಲ್ ಗಂಜ್(ಮೀಸಲು)ಕ್ಷೇತ್ರದಿಂದ ಬಿಎಸ್ಪಿ ಮುಖ್ಯಸ್ಥೆಯ ಮಾಜಿ ಆಪ್ತ ಆರ್‌.ಕೆ. ಚೌಧರಿಯನ್ನು ಕಣಕ್ಕಿಳಿಸಿದೆ. ಅಂಬೇಡ್ಕರ್ ನಗರ ಕ್ಷೇತ್ರದಿಂದ ಉಮ್ಮೆದ್ ಸಿಂಗ್ ನಿಶಾದ್‌ರನ್ನು, ಅಪ್ನಾ ದಳದ ಕೃಷ್ಣ ಪಟೇಲ್‌ರನ್ನು ಗೊಂಡಾ ಜಿಲ್ಲೆಯಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಖಾಡಕ್ಕೆ ಧುಮುಕಿರುವ ಪ್ರಿಯಾಂಕಾ ಮೇಲೆ ಬಿಜೆಪಿ ಸಹಿತ ಇತರ ಪಕ್ಷಗಳು ಕಣ್ಣಿಟ್ಟಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಉತ್ತರಪ್ರದೇಶ ಪೂರ್ವ)ಆಗಿ ಜವಾಬ್ದಾರಿವಹಿಸಿಕೊಂಡಿರುವ ಪ್ರಿಯಾಂಕಾ ಪಕ್ಷದ ಪರ ಸಾಕಷ್ಟು ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News