ಕಳೆದ ವರ್ಷ ಚುನಾವಣಾ ರಾಯಭಾರಿಯಾಗಿದ್ದ ರಾಹುಲ್ ದ್ರಾವಿಡ್ ಈ ಬಾರಿ ಮತದಾನ ಹಕ್ಕಿನಿಂದ ವಂಚಿತರು

Update: 2019-04-14 10:14 GMT

ಬೆಂಗಳೂರು: ಕಳೆದ ವರ್ಷದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಚುನಾವಣಾ ಆಯೋಗದ ಚುನಾವಣಾ ರಾಯಭಾರಿಯಾಗಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಬೆಂಗಳೂರಿನವರಾಗಿರುವ ರಾಹುಲ್ ದ್ರಾವಿಡ್,  ಸದ್ಯದಲ್ಲಿಯೇ ನಡೆಯಲಿರುವ  ಲೋಕಸಭಾ ಚುನಾವಣೆಯಲ್ಲಿ  ತಮ್ಮ ಮತದಾನ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿರುವುದೇ ಇದಕ್ಕೆ ಕಾರಣ.

ಕೆಲ ಸಮಯದ ಹಿಂದೆ ತಮ್ಮ ಮನೆ ಬದಲಾವಣೆ ಮಾಡಿದ್ದ ಸಮದರ್ಭ ತಮ್ಮ ಹಳೆ ಕ್ಷೇತ್ರವಾದ ಇಂದಿರಾನಗರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ರಾಹುಲ್ ತೆಗೆಸಿದ್ದರು. ಆದರೆ ಹೊಸ ಕ್ಷೇತ್ರದಲ್ಲಿ ಅವರ ಹೆಸರು ಅಂತಿಮ ದಿನಾಂಕದ ಮೊದಲು ಸೇರ್ಪಡೆಯಾಗಿರಲಿಲ್ಲ.

ಚುನಾವಣಾ ಆಯೋಗದ ವಿಶೇಷ ಅಭಿಯಾನದ ಸಂದರ್ಭ ರಾಹುಲ್ ಅವರ ಸೋದರ ವಿಜಯ್, ಪಟ್ಟಿಯಿಂದ ಹೆಸರು ತೆಗೆಸುವ ಸಲುವಾಗಿರುವ ಫಾರ್ಮ್ 7 ತುಂಬಿಸಿ ಸಲ್ಲಿಸಿದ್ದರು. ಆದರೆ ಆಗ ದ್ರಾವಿಡ್ ಅವರು ಆರ್ ಎಂ ವಿ ಎಕ್ಸ್‍ಟೆನ್ಶನ್ ನಲ್ಲಿನ ಅಶ್ವಥನಗರದ ತಮ್ಮ ಹೊಸ ಮನೆಗೆ  ಸ್ಥಳಾಂತರಗೊಂಡಿರಲಿಲ್ಲ. ಆದರೆ ತಮ್ಮ ಹೊಸ ಸ್ಥಳದ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ರಾಹುಲ್ ದ್ರಾವಿಡ್ ಫಾರ್ಮ್ 6 ತುಂಬಿರಲಿಲ್ಲ.

ಮತದಾರರ ಪಟ್ಟಿಯ ಮೊದಲ ಕರಡು ಜನವರಿಯಲ್ಲಿ ಪ್ರಕಟಗೊಂಡಿದ್ದರೆ ಅಂತಿಮ ಪಟ್ಟಿ ಮಾರ್ಚ್ 16ರಂದು ಹೊರಬಿದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ  ಮತ್ತೀಕರೆ ಉಪವಿಭಾಗದ ಸಹಾಯಕ ಚುನಾವಣಾಧಿಕಾರಿ ರೂಪಾ "ನಮ್ಮ ಅಧಿಕಾರಿಗಳು ಅವರ ಮನೆಗೆ ಎರಡು ಬಾರಿ ಹೋಗಿದ್ದರೂ ನಮಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿರಲಿಲ್ಲ, ರಾಹುಲ್ ವಿದೇಶ ಪ್ರವಾಸದಲ್ಲಿದ್ದಾರೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತಂತೆ ಅವರು ಏನನ್ನೂ ಹೇಳಿಲ್ಲವೆಂದು ಹೇಳಲಾಗಿತ್ತು,'' ಎಂದಿದ್ದಾರೆ.

"ಅವರು ಫಾರ್ಮ್ 6ನ್ನು ಮಾರ್ಚ್ 16ರೊಳಗೆ ಸಲ್ಲಿಸಬೇಕಿತ್ತು, ನಂತರ  ಏನೂ ಮಾಡುವ ಹಾಗಿಲ್ಲ. ನಮ್ಮ ಅಧಿಕಾರಿಗಳು ಅವರ ನಿವಾಸಕ್ಕೆ ಹೋಗಿದ್ದಾಗ ಇಂದಿರಾನಗರದ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕಲಾಗಿದೆ ಎಂದಾದರೂ ಹೇಳಿದ್ದರೆ ಏನಾದರೂ ಮಾಡಬಹುದಾಗಿತ್ತು,'' ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೆ ಎನ್ ರಮೇಶ್ ಹೇಳಿದ್ದರೆ.

ಮೂಲಗಳ ಪ್ರಕಾರ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂಬ ವಿಚಾರ ಅವರಿಗೆ ಮಾರ್ಚ್ 16ರ ನಂತರವಷ್ಟೇ ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News