ಸಂವಿಧಾನ ವಿರೋಧಿಗಳ ವಿರುದ್ಧ ನನ್ನ ಹೋರಾಟ: ಬಿ.ಕೆ.ಹರಿಪ್ರಸಾದ್

Update: 2019-04-14 14:27 GMT

ಬೆಂಗಳೂರು, ಎ.14 : ಬೇರೆಯವರ ಟೀಕೆಗಳಿಗೆ ಪ್ರತ್ಯುತ್ತರ ನೀಡುವುದು ನನ್ನ ಕೆಲಸವಲ್ಲ. ಸಂವಿಧಾನ ವಿರೋಧಿಗಳ ವಿರುದ್ಧ ಹಾಗೂ ಮೀಸಲಾತಿ ಪರವಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ನನ್ನ ಹೋರಾಟವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿಂದು ಎರಡನೇ ಸ್ವತಂತ್ರ ಹೋರಾಟ ನಡೆಯುತ್ತಿದೆ. ಇದುವರೆಗೂ ನನ್ನ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ನನ್ನ ವಿರುದ್ಧ ವೈಯುಕ್ತಿಕವಾಗಿ ಟೀಕಿಸಿಲ್ಲ, ನಾನೂ ಅದನ್ನು ಮಾಡಿಲ್ಲ ಎಂದು ತಿಳಿಸಿದರು.

ಸಂವಿಧಾನ ಉಳಿಸಬೇಕು, ಪ್ರಜಾಪ್ರಭುತ್ವ ಉಳಿಯಬೇಕು, ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಬೇಕು ಎಂಬುದರ ಕಡೆ ನನ್ನ ಹೋರಾಟವಾಗಿದೆ ಎಂದ ಅವರು, ಉತ್ತರ ಪ್ರದೇಶದಲ್ಲಿನ ಬಿಜೆಪಿ ಅಭ್ಯರ್ಥಿಯೊಬ್ಬರು ಈ ಬಾರಿಯ ಚುನಾವಣೆ ಬಳಿಕ ಮತ್ತೊಂದು ಚುನಾವಣೆ ನಡೆಯುವುದಿಲ್ಲ ಎಂದಿದ್ದಾರೆ. ಅಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರವನ್ನು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅಪಾದಿಸಿದರು.

ಮೋದಿ ವಿರುದ್ಧ ಸ್ಪರ್ಧೆಗೆ ಇಲ್ಲಿಗೆ ಬಂದೆ: ಬಿಜೆಪಿ ಒಳಗಿರುವ ರಾಜಕಾರಣದ ಬಗ್ಗೆ ಕೆದಕುವುದಿಲ್ಲ. ಪ್ರಧಾನಿ ಮೋದಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ಇಲ್ಲಿಂದ ಸ್ಪರ್ಧಿಸಲು ಹೇಳಿತು. ನಾನು ಖಮ್ಮಂ ನಿಂದ ನಾಮಪತ್ರ ಸಲ್ಲಿಸಲು ತೆರಳಿದ್ದರೂ, ಅಲ್ಲಿಂದ ವಾಪಸ್ಸು ಬಂದೆ ಎಂದು ನುಡಿದರು.

ಬಿಜೆಪಿಯವರು ಭಯೋತ್ಪಾದನೆ ನಿರ್ಮೂಲನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವುದು ಮೂರ್ಖತನದ ಪರಮಾವಧಿ. ಅದೇ ಆಗಿದ್ದರೆ ಪಟಾನ್ ಕೋಟ್‌ನಲ್ಲಿ ಏರ್‌ಪೋರ್ಸ್ ಮೇಲೆ ದಾಳಿ, ಉರಿ ದಾಳಿ, ಪುಲ್ವಾಮ ದಾಳಿ ಮಾಡಲಾಗಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಮೋದಿ ಪಾಕಿಸ್ತಾನದ ಪ್ರಧಾನಿ ಆಹ್ವಾನಿಸದಿದ್ದರೂ ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬಂದರು. ಅವರ ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿಯನ್ನು ಆಹ್ವಾನಿಸಿದರು. ಮೋದಿಯದು ಯಾವ ಕ್ಲಾಸ್ ಎಂದೇ ಅರ್ಥವಾಗುವುದಿಲ್ಲ ಎಂದರು.

ಕೆಂಪೇಗೌಡ, ಟಿಪ್ಪು ಕಾಲದಲಿಯೇ ಸಿಲ್ಕ್ ಸಿಟಿ ಇತ್ತು: ಬೆಂಗಳೂರು ಅದರಲ್ಲೂ ಬೆಂಗಳೂರು ದಕ್ಷಿಣ ಭಾಗ ದೇಶ ಅಷ್ಟೇ ಅಲ್ಲ ಜಗತ್ತಿನಲ್ಲೆ ಹೆಸರುವಾಸಿಯಾಗಿರುವ ಕ್ಷೇತ್ರವಾಗಿದೆ. ಐಟಿ-ಬಿಟಿ ಕೇಂದ್ರವಾಗಿರುವ ಈ ಪ್ರದೇಶವನ್ನು ಪ್ರಾಮುಖ್ಯತೆಗೆ ತರಲು ಆಗಿನ ಪ್ರಧಾನಿ ರಾಜೀವ್ ಗಾಂಧಿ ಪಾತ್ರ ಮಹತ್ವದ್ದು. ಟಿಪ್ಪು ಸುಲ್ತಾನ್ ಹಾಗೂ ಕೆಂಪೇಗೌಡರ ಕಾಲದಲ್ಲಿ ಸಿಲ್ಕ್ ಸಿಟಿಯಾಗಿದ್ದ ಬೆಂಗಳೂರು ನಗರ ಇಂದು ಸಿಲಿಕಾನ್ ಸಿಟಿ ಎಂದು ಹೆಸರು ಪಡೆದುಕೊಂಡಿದೆ. ಬೆಂಗಳೂರು ನಗರದ ಅಭಿವೃದ್ದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೊಡುಗೆ ಅಪಾರ ಎಂದು ತಿಳಿಸಿದರು.

ನಗರದ ಗತಕಾಲದ ವೈಭವವನ್ನು ವಾಪಾಸ್ಸು ತರುವುದು ನನ್ನ ಮೊದಲ ಗುರಿಯಾಗಿದೆ. ಈ ನಿಟ್ಟಿನಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಹೊರತಾಗಿ ನಗರದ ನಾಲ್ಕೂ ಕಡೆಯಲ್ಲೂ ಉದ್ಯಾನವನಗಳನ್ನು ನಿರ್ಮಿಸುವುದು ನಮ್ಮ ಕನಸಾಗಿದೆ. ಬೊಮ್ಮನಹಳ್ಳಿಯಲ್ಲಿ ಇದಕ್ಕೆ ಸಾಕಷ್ಟು ಜಾಗ ಲಭ್ಯವಿದ್ದು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಮೇಕೇದಾಟು ಬಳಿ ರ್ನಿುಸಲು ಚಿಂತಿಸಲಾಗಿರುವ ಅಣೆಕಟ್ಟಿನಿಂದ ನೀರು ತರುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಪ್ರಧಾನಿ ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವುದರ ಬಗ್ಗೆ 15 ನಿಮಿಷಗಳ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲಿ ಎಂದು ಸವಾಲು ಹಾಕಿದ ಅವರು, ಯಾವುದೇ ಭರವಸೆಗಳನ್ನೂ ಈಡೇರಿಸದ ಪ್ರಧಾನಿ ಮಾಧ್ಯಮದವರ ಮುಂದೆ ಬರಲು ಹೆದರುತ್ತಿದ್ದಾರೆ. 15 ನಿಮಿಷ ನೆಹರು ಮತ್ತು ಕುಟುಂಬ, 15 ನಿಮಿಷ ಕಾಂಗ್ರೆಸ್ ಅನ್ನು ಬೈತಾರೆ. ಇನ್ನು 15 ನಿಮಿಷ ಸೈನ್ಯ, ಯೋಧರು ಸೇರಿದಂತೆ ಭಾವನಾತ್ಮಕ ವಿಚಾರಗಳನ್ನು ಮಾತನಾಡಿ ಹೋಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರ ಜೊತೆಯಲ್ಲಿ ನನಗೆ ಬಹಳ ಒಳ್ಳೆಯ ಸಂಬಂಧವಿದೆ. ಅವರ ಆಶೀರ್ವಾದ ಪಡೆದುಕೊಂಡೇ ನಾನು ಸ್ಪರ್ಧೆಗೆ ಇಳಿದಿದ್ದೇನೆ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈಗ ಇರುವ ಪರಿಸ್ಥಿತಿಗಳ ಆಧಾರದಲ್ಲಿ ಹೇಳುವುದಾದರೆ ನಾನು ಗೆಲ್ಲುವು ಸಾಧಿಸಲಿದ್ದೇನೆ ಎಂಬ ವಿಶ್ವಾಸವಿದೆ. ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಲವೂ ಅಧಿಕವಿದ್ದು, ಜೆಡಿಎಸ್ ಜತೆಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.

- ಬಿ.ಕೆ.ಹರಿಪ್ರಸಾದ್, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News